ಫ್ರೆಂಚ್ ಓಪನ್ 2019: ಕೆರ್ಬರ್‌ಗೆ ಶಾಕ್!
18 ವರ್ಷ ವಯಸ್ಸಿನ ರಷ್ಯಾದ ಟೆನಿಸ್ ಆಟಗಾರ್ತಿ ಅನಾಸ್ಟಸಿಯಾ ಪೊಟಪೊವಾ, ಜರ್ಮನಿಯ 5ನೇ ರ‍್ಯಾಂಕಿಂಗ್ ಆಟಗಾರ್ತಿ ಕೆರ್ಬರ್ ವಿರುದ್ಧ ಗೆದ್ದು 2ನೇ ಸುತ್ತು ಪ್ರವೇಶಿಸಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್’ನ ಮೊದಲ ಸುತ್ತಿನಲ್ಲಿ ಕೆರ್ಬರ್, ಪೊಟಪೊವಾ ವಿರುದ್ಧ 6-4, 6-2 ಸೆಟ್’ಗಳಲ್ಲಿ ಸೋಲು ಕಂಡರು.
ಪ್ಯಾರಿಸ್[ಮೇ.27]: 2019ರ 2ನೇ ಗ್ರ್ಯಾಂಡ್ ಸ್ಲಾಮ್ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಮೊದಲ ದಿನವೇ ಹಲವು ಅನಿರೀಕ್ಷಿತಗಳಿಗೆ ಕಾರಣವಾಗಿದೆ. 2018ರ ವಿಂಬಲ್ಡನ್ ಚಾಂಪಿಯನ್ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್, ಮೊದಲ ಸುತ್ತಲ್ಲಿ ಆಘಾತ ಅನುಭವಿಸಿ ಹೊರಬಿದ್ದಿದ್ದಾರೆ. ಉಳಿದಂತೆ 20 ಗ್ರ್ಯಾಂಡ್ ಸ್ಲಾಂ ಒಡೆಯ ಸ್ವಿಜರ್ಲೆಂಡ್ನ ರೋಜರ್ ಫೆಡರರ್, ಜಪಾನ್‌ನ ಕೇನಿಶಿಕೋರಿ, ಟ್ಸಿಟ್ಸಿಪಾಸ್, ಮರಿನ್ ಸಿಲಿಕ್ ಶುಭಾರಂಭಮಾಡಿದ್ದಾರೆ.
18 ವರ್ಷ ವಯಸ್ಸಿನ ರಷ್ಯಾದ ಟೆನಿಸ್ ಆಟಗಾರ್ತಿ ಅನಾಸ್ಟಸಿಯಾ ಪೊಟಪೊವಾ, ಜರ್ಮನಿಯ 5ನೇ ರ‍್ಯಾಂಕಿಂಗ್ ಆಟಗಾರ್ತಿ ಕೆರ್ಬರ್ ವಿರುದ್ಧ ಗೆದ್ದು 2ನೇ ಸುತ್ತು ಪ್ರವೇಶಿಸಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ ಕೆರ್ಬರ್, ಪೊಟಪೊವಾ ವಿರುದ್ಧ 6-4, 6-2 ಸೆಟ್ಗಳಲ್ಲಿ ಸೋಲು ಕಂಡರು. 31 ವರ್ಷ ವಯಸ್ಸಿನ ಕೆರ್ಬರ್, ಇದು ಸೇರಿದಂತೆ 6ನೇ ಬಾರಿ ಫ್ರೆಂಚ್ ಓಪನ್ನ ಮೊದಲ ಸುತ್ತಲ್ಲಿ ಹೊರಬಿದ್ದಿದ್ದಾರೆ. ಇತ್ತೀಚೆಗಷ್ಟೇ ಮ್ಯಾಡ್ರಿಡ್ನಲ್ಲಿ ನಡೆದ ಇಟಲಿ ಓಪನ್ನ 2ನೇ ಸುತ್ತಿನಲ್ಲಿ ಕೆರ್ಬರ್ ಗಾಯಗೊಂಡು ನಿರ್ಗಮಿಸಿದ್ದರು. ಉಳಿದಂತೆ ಸ್ಪೇನ್ನ ಗರ್ಬೈನ್ ಮುಗುರುಜಾ, ಸ್ವಿಜರ್ಲೆಂಡ್’ನ ಬೆಲಿಂದಾ ಬೆನ್ಸಿಕ್, ಚೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಹಾಗೂ ಸ್ವೀಡನ್’ನ ಜೊಹನ್ನಾ ಲಾರ್ಸನ್ 2ನೇ ಸುತ್ತು ಪ್ರವೇಶಿಸಿದ್ದಾರೆ.
ಮೊದಲ ಸುತ್ತಲ್ಲಿ ವೀನಸ್ ಔಟ್: 2002ರ ಫೈನಲ್ ಸ್ಪರ್ಧಿ ಅಮೆರಿಕದ ವೀನಸ್ ವಿಲಿಯಮ್ಸ್, ಮೊದಲ ಸುತ್ತಲ್ಲೇ ಉಕ್ರೇನ್ನ ಎಲಿನಾ ಸ್ವಿಟೋಲಿನಾ ಎದುರು 3-6, 3-6 ಸೆಟ್’ಗಳಲ್ಲಿ ಸೋತು ಹೊರಬಿದ್ದರು.
ಪ್ರಜ್ಞೇಶ್’ಗೆ ಸೋಲು ಪುರುಷರ ಸಿಂಗಲ್ಸ್’ನಲ್ಲಿ ಕಣಕ್ಕಿಳಿದಿದ್ದ ಭಾರತದ ಏಕೈಕ ಟೆನಿಸ್ ಆಟಗಾರ ಪ್ರಜ್ನೇಶ್ ಗುಣೇಶ್ವರನ್ ಮೊದಲ ಸುತ್ತಲ್ಲಿ ಸೋಲುಂಡು ನಿರ್ಗಮಿಸಿದ್ದಾರೆ. ಪ್ರಜ್ನೇಶ್, ಬೊಲಿವಿಯಾದ ಹುಗೊ ಡೆಲ್ಲಿಯನ್ ವಿರುದ್ಧ 1-6, 3-6, 1-6 ಸೆಟ್’ಗಳಲ್ಲಿ ಪರಾಭವ ಹೊಂದಿದರು. ಕಳೆದ ಒಂದು ವರ್ಷದಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದ ಎಡಗೈ ಆಟಗಾರ ಪ್ರಜ್ನೇಶ್ ಮೊದಲ ಸುತ್ತಲ್ಲಿ ಹೊರಬಿದ್ದು ನಿರಾಸೆ ಮೂಡಿಸಿದ್ದಾರೆ.
ಫೆಡರರ್‌ಗೆ ಜಯ
ದಾಖಲೆಯ 21ನೇ ಗ್ರ್ಯಾಂಡ್ ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸ್ವಿಜರ್ಲೆಂಡ್’ನ ರೋಜರ್ ಫೆಡರರ್, ಮೊದಲ ಸುತ್ತಿನಲ್ಲಿ ಸುಲಭ ಜಯ ಸಾಧಿಸಿ ಶುಭಾರಂಭ ಮಾಡಿದರು. ಫೆಡರರ್, ಇಟಲಿಯ ಲೊರೆಂಜೊ ಸೊನೆಗೊ ವಿರುದ್ಧ 6-2, 6-4, 6-4 ಸೆಟ್’ಗಳಲ್ಲಿ ಗೆಲುವು ಪಡೆದರು. 4 ವರ್ಷಗಳ ಗೈರು ಹಾಜರಿ ಬಳಿಕ ಆವೆ ಮಣ್ಣಿನ ಅಂಗಳಕ್ಕೆ ಇಳಿದ ಫೆಡರರ್, ಮೊದಲ ಸುತ್ತಿನಲ್ಲಿ ಅದ್ಭುತ ಆಟದಿಂದ ಗಮನಸೆಳೆದರು. ಇನ್ನುಳಿದಂತೆ ಜಪಾನ್’ನ ನಿಶಿಕೋರಿ, ಟ್ಸಿಟ್ಸಿಪಾಸ್, ಮರಿನ್ ಸಿಲಿಕ್ 2ನೇ ಸುತ್ತಿಗೇರಿದ್ದಾರೆ.