ನವದೆಹಲಿ[ಡಿ.03]: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹಾಗೂ ಕೋಚ್ ರಮೇಶ್ ಪವಾರ್ ಕಿತ್ತಾಟದ ಪರಿಣಾಮವಾಗಿ, ರಮೇಶ್ ಪೊವಾರ್ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಈ ಸ್ಥಾನಕ್ಕೆ ಕನ್ನಡಿಗ ವೆಂಕಟೇಶ್ ಪ್ರಸಾದ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ವೆಂಕಟೇಶ್ ಪ್ರಸಾದ್ ಅಲ್ಲದೇ ಆಸ್ಟ್ರೇಲಿಯಾದ ಟಾಮ್ ಮೂಡಿ ಮತ್ತು ಡೇವ್ ವಾಟ್ಮೋರ್ ಕೂಡ ಕೋಚ್ ರೇಸ್’ನಲ್ಲಿ ಇದ್ದಾರೆ. ಮಿಥಾಲಿ ರಾಜ್ ಅವರೊಂದಿಗೆ ಮುನಿಸಿಕೊಂಡಿದ್ದ ಕೋಚ್ ರಮೇಶ್ ಪೊವಾರ್’ರನ್ನು ಈಗಾಗಲೇ ಬಿಸಿಸಿಐ ಕಿತ್ತು ಹಾಕಿದೆ. ಆ ಸ್ಥಾನಕ್ಕೆ ಸೂಕ್ತ ಕೋಚ್’ನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಇದರ ಮಧ್ಯೆಯೇ ಶನಿವಾರವಷ್ಟೇ ಸುಪ್ರೀಂ ನೇಮಿತ ಬಿಸಿಸಿಐ ಸಮಿತಿ ಸಿಒಎ, ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ , ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಸಲಹಾ ಸಮಿತಿಗೆ, ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಕೋಚ್ ಅನ್ನು ನೇಮಿಸುವಂತೆ ಸೂಚನೆ ನೀಡಿದೆ.

ಡಿ. 20ರಂದು ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಕೋಚ್’ಗಳಿಗೆ ಸಂದರ್ಶನ ನಡೆಯಲಿದೆ. ಒಂದೊಮ್ಮೆ ಬಿಸಿಸಿಐ ದೇಶಿಯ ಕೋಚ್’ಗಳ ಬಗ್ಗೆ ಒಲವು ತೋರಿದರೆ ಕನ್ನಡಿಗ ವೆಂಕಟೇಶ್ ಪ್ರಸಾದ್ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅಂತರಾಷ್ಟ್ರೀಯ ಕ್ರಿಕೆಟ್ ತಂಡಗಳಿಗೆ ತರಬೇತಿ ನೀಡಿರುವ ಮತ್ತು ಕೋಚಿಂಗ್’ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಮಾಜಿ ಆಟಗಾರರನ್ನು ಕೋಚ್ ಹುದ್ದೆಗೆ ನೇಮಿಸುವಂತೆ ಬಿಸಿಸಿಐ ಹೇಳಿದೆ. ಕನಿಷ್ಠ 1 ಋತುವಿನಲ್ಲಿ ಅಂ.ರಾ. ಕ್ರಿಕೆಟ್ ತಂಡಕ್ಕೆ ಅಥವಾ 2 ಋತುವಿನಲ್ಲಿ ಟಿ20 ಫ್ರಾಂಚೈಸಿ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡಿರುವ ಅನುಭವ ಇರುವ ಕೋಚ್’ಗಳು ಸೂಕ್ತ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಕೋಚ್ ಆಗಿ ಆಯ್ಕೆಯಾಗುವವರು ಪೂರ್ಣಾವಧಿಯಾಗಿದ್ದು, 2 ವರ್ಷಗಳ ಒಪ್ಪಂದ ಆಗಿದೆ. 60 ವರ್ಷದೊಳಗಿನವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಕಳೆದ ಶುಕ್ರವಾರ ಬಿಸಿಸಿಐ ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್’ಗೆ ಅರ್ಜಿ ಆಹ್ವಾನಿಸಿದೆ. ಈ ಮುಖೇನ ಪೊವಾರ್ ಕೋಚ್ ಸ್ಥಾನವನ್ನು ಕಳೆದುಕೊಂಡಂತಾಗಿದೆ. ರಮೇಶ್ ಗುತ್ತಿಗೆ ವಿಸ್ತರಣೆ ಮಾಡಲು ಬಿಸಿಸಿಐ ನಿರಾಕರಿಸಿದೆ. ಹೊಸ ಕೋಚ್ ಹುದ್ದೆಗೆ ಈಗಾಗಲೇ ಅರ್ಜಿ ಕರೆದಿದ್ದು, ಶೀಘ್ರದಲ್ಲಿ ನೂತನ ಕೋಚ್ ಆಯ್ಕೆಯಾಗುವ ಸಾಧ್ಯತೆಯಿದೆ. ಪೊವಾರ್’ಗೂ ಮುನ್ನ ಇದ್ದ ಕೋಚ್ ತುಷಾರ್ ಆರೋಠೆ ಕೂಡ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿಯರೊಂದಿಗೆ ಮುನಿಸಿಕೊಂಡಿದ್ದರು. ಇದೀಗ ಪೊವಾರ್ ಕೂಡ ತಂಡದ ಹಿರಿಯ ಆಟಗಾರ್ತಿ ಮಿಥಾಲಿಯೊಂದಿಗೆ ಜಗಳ ಮಾಡಿಕೊಂಡು ಕೋಚ್ ಹುದ್ದೆಯಿಂದ ಕೆಳಕ್ಕಿಳಿದಿದ್ದಾರೆ.