100 ಮೀ. ಹಾಗೂ 200 ಮೀ. ಓಟದಲ್ಲಿ ವಿಶ್ವದಾಖಲೆ ಬರೆದಿರು ಜೈಮಕನ್ ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ಇದೀಗ ವೃತ್ತಿಪರ ಫುಟ್ಬಾಲ್ ಪಟುವಾಗಲು ನಿರ್ಧರಿಸಿದ್ದಾರೆ. ಅಥ್ಲೆಟಿಕ್ಸ್‌ನಿಂದ ನಿವೃತ್ತಿ ಹೇಳಿದ ಬಳಿಕ ಇದೀಗ ಫುಟ್ಬಾಲ್‌ನಲ್ಲಿ ಸಕ್ರೀಯವಾಗಿರೋ ಬೋಲ್ಟ್, ಆಸ್ಟ್ರೇಲಿಯಾ ಫುಟ್ಬಾಲ್ ಕ್ಲಬ್ ಸೇರಿಕೊಳ್ಳುತ್ತಾರ? ಇಲ್ಲಿದೆ ವಿವರ.

ಸಿಡ್ನಿ(ಜು.18): ವಿಶ್ವದ ವೇಗದ ಮಾನವ ಉಸೇನ್ ಬೋಲ್ಟ್ ತಮ್ಮ ಬಹುದಿನದ ಕನಸನ್ನು ನನಸಾಗಿಸಿಕೊಳ್ಳುವ ಸಮಯ ಹತ್ತಿರ ಬಂದಿದೆ. ಆಸ್ಟ್ರೇಲಿಯಾದ ಎ-ಲೀಗ್ ಫುಟ್ಬಾಲ್ ತಂಡದ ಸೆಂಟ್ರಲ್ ಕೋಸ್ಟ್ ಮ್ಯಾರಿನರ್ಸ್‌ ತಂಡದೊಂದಿಗೆ ಬೋಲ್ಟ್ ಒಪ್ಪಂದಕ್ಕೆ ಸಹಿ ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಅಥ್ಲೆಟಿಕ್ಸ್‌ನಿಂದ ನಿವೃತ್ತಿ ಪಡೆದಿದ್ದ ಬೋಲ್ಟ್, ವೃತ್ತಿಪರ ಫುಟ್ಬಾಲ್ ಆಟಗಾರನಾಗಬೇಕು ಎನ್ನುವ ಗುರಿ ಹೊಂದಿದ್ದಾರೆ. ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಅಪ್ಪಟ ಅಭಿಮಾನಿಯಾಗಿರುವ ಬೋಲ್ಟ್, ಯಾವುದಾದರೂ ಒಂದು ವೃತ್ತಿಪರ ಕ್ಲಬ್ ಪರ ಆಡಲು ಹುಡುಕಾಟ ನಡೆಸಿದ್ದಾರೆ. 

100 ಮೀ. ಹಾಗೂ 200 ಮೀ. ಓಟದಲ್ಲಿ ವಿಶ್ವದಾಖಲೆ ಹೊಂದಿರುವ ಬೋಲ್ಟ್ ಕಳೆದ ತಿಂಗಳು ನಾರ್ವೆಯ ಸ್ಟ್ರಾಮ್ಸ್‌ಗಾಡ್ ಸೆಟ್ ಕ್ಲಬ್ ಜತೆ ಅಭ್ಯಾಸ ನಡೆಸಿದ್ದರು. ಮಾರ್ಚ್‌ನಲ್ಲಿ ಜರ್ಮನಿಯ ಬಂಡೆಸ್‌ಲೀಗಾದ ತಂಡ ಬೊರುಸ್ಸಿಯಾ ಡಾರ್ಟ್ಮಂಡ್ ತಂಡದೊಂದಿಗೂ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. 

ಸಿಡ್ನಿಯಿಂದ 75 ಕಿ.ಮೀ ದೂರದಲ್ಲಿರುವ ಗೊಸ್ಫೋರ್ಡ್, ಸೆಂಟ್ರಲ್ ಕೋಸ್ಟ್ ಮ್ಯಾರಿನರ್ಸ್‌ ತಂಡದ ಮೂಲಸ್ಥಾನವಾಗಿದ್ದು, ಬೋಲ್ಟ್ ಅಲ್ಲಿ 6 ವಾರಗಳ ಕಾಲ ತಂಡದೊಂದಿಗೆ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಂಡದ ಸಿಇಓ ಶಾನ್ ಮಿಲೆಕಾಂಪ್ ಹೇಳಿದ್ದಾರೆ. ‘ಯುರೋಪಿಯನ್ ಕ್ಲಬ್ ಗಳೊಂದಿಗೆ ಬೋಲ್ಟ್ ಅಭ್ಯಾಸ ಹೇಗಿತ್ತು ಎನ್ನುವ ವರದಿ ತರಿಸಿಕೊಂಡಿದ್ದೇವೆ. ಒಂದೊಮ್ಮೆ ಬೋಲ್ಟ್ ಆಟ ಸಮಾಧಾನ ತಂದರೆ, ತಂಡದೊಂದಿಗೆ ಅವರು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ’ ಎಂದು ಶಾನ್ ತಿಳಿಸಿದ್ದಾರೆ.