ನ್ಯೂಯಾರ್ಕ್(ಸೆ.09): ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಜಪಾನ್‌ನ ನವೋಮಿ ಒಸಾಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಅಮೇರಿಕಾದ ಸೆರೆನಾ ವಿಲಿಯಮ್ಸ್ ಮಣಿಸೋ ಮೂಲಕ ಒಸಾಕ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

 

 

ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಸೆರೆನಾ ವಿರುದ್ಧ ಒಸಾಕ 6-2,6-4 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಒಸಾಕ 27 ಕೋಟಿ ರೂಪಾಯಿ ಬಹುಮಾನ ಪಡೆದರು.

ಪ್ರಶಸ್ತಿ ಪಡೆದ ಒಸಾಕ ಸಂತಸ ವ್ಯಕ್ತಪಡಿಸಿದರು. ಇಡೀ ಕ್ರೀಡಾಂಗಣವೇ ಸೆರೆನಾ..,ಸೆರೆನಾ ಎಂದು ಕೂಗುತ್ತಿತ್ತು. ಎಲ್ಲರಿಗೂ ಸೆರೆನಾ ಗೆಲುವು ಸಾಧಿಸಬೇಕು ಅನ್ನೋ ಬಯಕೆ ಇತ್ತು. ಆದರೆ ಸೆರೆನಾ ವಿರುದ್ಧ ಆಡುವುದೇ ನನ್ನ ಬಹುದೊಡ್ಡ ಕನಸಾಗಿತ್ತು ಎಂದು ಒಸಾಕ ಹೇಳಿದ್ದಾರೆ.  

ಫೈನಲ್ ಸುತ್ತಿನಲ್ಲಿ ಸೋಲು ಅನುಭವಿಸಿದ ಸೆರೆನಾ ಕಣ್ಣೀರಿನೊಂದಿಗೆ ರನ್ನರ್ ಅಪ್ ಪ್ರಶಸ್ತಿ ಪಡೆದರು. ಒಸಾಕ ಅತ್ಯುತ್ತಮ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

 

 

ಈ ಬಾರಿಯ ಮಹಿಳಾ ಯುಎಸ್ ಓಪನ್ ಫೈನಲ್ ಪಂದ್ಯ ಹಲವು ವಿವಾದಕ್ಕೂ ಕಾರಣವಾಯಿತು. ನಿಯಮ ಉಲ್ಲಂಘನೆಯಿಂದ ಹಲವು ಬಾರಿ ಚೇರ್ ರೆಫ್ರಿ  ಕಾರ್ಲೋಸ್ ರಾಮೊಸ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಮೋಸಗಾರ ಅಂಪೈರ್ ಎಂದು ಸೆರೆನಾ ಕಾರ್ಲೋಸ್ ವಿರುದ್ಧ ವಾಗ್ದಾಳಿ ನಡೆಸಿದರು.