ನ್ಯೂಯಾರ್ಕ್[ಸೆ.09]: ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ಸ್ಪೇನ್’ನ ರಾಫೆಲ್ ನಡಾಲ್ 2019ನೇ ಸಾಲಿನ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ರಷ್ಯಾ ಡಾನಿಲ್‌ ಮೆಡ್ವೆಡೆವ್‌ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 33 ವರ್ಷದ ನಡಾಲ್ ಸಿಂಗಲ್ಸ್’ನಲ್ಲಿ ಗೆದ್ದ 19ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಇದಾಗಿದೆ.  

ಕೆನಡಾ ಹುಡುಗಿ ಆಂಡ್ರಿಕ್ಸ್ US ಓಪನ್ ಒಡತಿ

ಸುಮಾರು 4 ಗಂಟೆ 50 ನಿಮಿಷ ನಡೆದ ಕಾದಾಟದಲ್ಲಿ ನಡಾಲ್ 7-5, 6-3, 5-7, 4-6, 6-4 ಸೆಟ್’ಗಳಲ್ಲಿ ಡಾನಿಲ್‌ ಮೆಡ್ವೆಡೆವ್‌ ಮಣಿಸಿ ಯುಎಸ್ ಪ್ರಶಸ್ತಿಗೆ ಮುತ್ತಿಕ್ಕಿದರು. ಇದರೊಂದಿಗೆ ನಾಲ್ಕನೇ ಯುಎಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ಮೊದಲು ನಡಾಲ್  2010, 2013 ಹಾಗೂ 2017ರಲ್ಲಿ ಯುಎಸ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. 

2019ರಲ್ಲಿ ನಡಾಲ್ ಗೆದ್ದ ಎರಡನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಯಾಗಿದ್ದು, ಈ ಮೊದಲು ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು. ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ 20 ಗ್ರ್ಯಾಂಡ್‌ಸ್ಲಾಂ ಜಯಿಸಿದ್ದು, ನಡಾಲ್ ಇನ್ನೊಂದು ಪ್ರಶಸ್ತಿ ಜಯಿಸಿದರೆ, ಫೆಡರರ್ ದಾಖಲೆ ಹಿಂದಿಕ್ಕಲಿದ್ದಾರೆ.

23 ವರ್ಷದ 5ನೇ ಶ್ರೇಯಾಂಕಿತ ಡಾನಿಲ್‌ ಮೆಡ್ವೆಡೆವ್‌ ಇದೇ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಫೈನಲ್ ಪ್ರವೇಶಿಸಿದ್ದರಾದರೂ, ಪ್ರಶಸ್ತಿ ಸುತ್ತಿನಲ್ಲಿ ಎಡವುದರ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.