Asianet Suvarna News Asianet Suvarna News

ಕೆನಡಾ ಹುಡುಗಿ ಆಂಡ್ರಿಕ್ಸ್ US ಓಪನ್ ಒಡತಿ

23 ಗ್ರ್ಯಾಂಡ್‌ಸ್ಲಾಂ ಒಡತಿ ಸೆರೆನಾ ವಿಲಿಯಮ್ಸ್‌ಗೆ ಯುಎಸ್ ಓಪನ್ ಟೂರ್ನಿಯಲ್ಲಿ 19ರ ಕೆನಡಾ ಆಟಗಾರ್ತಿ ಆಘಾತ ನೀಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

US Open 2019 final Bianca Andreescu beats Serena Williams
Author
New York, First Published Sep 9, 2019, 9:54 AM IST
  • Facebook
  • Twitter
  • Whatsapp

ನ್ಯೂಯಾರ್ಕ್[ಸೆ.09]: 2019ರ ಋತುವಿನ ಕೊನೆಯ ಗ್ರ್ಯಾಂಡ್‌ಸ್ಲಾಂ ಯುಎಸ್ ಓಪನ್‌ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. 19 ವರ್ಷದ ಟೆನಿಸ್ ಆಟಗಾರ್ತಿ ಬಿಯಾಂಕಾ ಆಂಡ್ರೀಸ್ಕು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾರತೀಯ ಕಾಲಮಾನ ಭಾನುವಾರ ಬೆಳಗಿನ ಜಾವ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಕೆನಡಾದ ಆಂಡ್ರೀಸ್ಕು, 23 ಗ್ರ್ಯಾಂಡ್‌ಸ್ಲಾಂ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್ ವಿರುದ್ಧ 6-3, 7-5 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದ್ದಾರೆ.

US ಓಪನ್‌ 2019: ನಡಾಲ್‌ಗೆ 19ನೇ ಗ್ರ್ಯಾಂಡ್‌ಸ್ಲಾಂ ಗುರಿ!

24ನೇ ಗ್ರ್ಯಾಂಡ್‌ಸ್ಲಾಂ ಕನಸು ಕಂಡಿದ್ದ ಸೆರೆನಾಗೆ, ಆಂಡ್ರೀಸ್ಕು ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗೆಲುವಿನ ಮೂಲಕ ಆಂಡ್ರೀಸ್ಕು, ಪ್ರತಿಷ್ಠಿತ ಗ್ರ್ಯಾಂಡ್‌ಸ್ಲಾಂ ಗೆದ್ದ ಕೆನಡಾದ ಮೊದಲ ಟೆನಿಸ್ ಆಟಗಾರ್ತಿ ಎನಿಸಿದರು. 2004ರ ಬಳಿಕ ಯುಎಸ್ ಓಪನ್ ಗೆದ್ದ ಅತಿ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಆಂಡ್ರೀಸ್ಕು ಪಾತ್ರರಾಗಿದ್ದಾರೆ. 2004ರಲ್ಲಿ ರಷ್ಯಾದ ಸ್ವೆಟ್ಲನಾ ಕುಜ್ನೆಟ್ಸೋವಾ ಯುಎಸ್ ಓಪನ್ ಗೆದ್ದ ಅತಿ ಕಿರಿಯ ಆಟಗಾರ್ತಿ ಎನಿಸಿದ್ದರು. 15ನೇ ಶ್ರೇಯಾಂಕಿತೆ ಬಿಯಾಂಕಾ ಆಂಡ್ರೀಸ್ಕು, ಯುಎಸ್ ಓಪನ್ ಗೆದ್ದಿದ್ದರಿಂದ, 2000 ಅಂಕಗಳನ್ನು ಪಡೆದರು. ಈ ಮೂಲಕ ಆಂಡ್ರೀಸ್ಕು ಸೋಮವಾರ ಬಿಡುಗಡೆಯಾಗುವ ಮಹಿಳೆಯರ ನೂತನ ಡಬ್ಲ್ಯೂಟಿಎ ಶ್ರೇಯಾಂಕದಲ್ಲಿ ನಂ.5 ಕ್ಕೇರಲಿದ್ದಾರೆ.

ಆಂಡ್ರೀಸ್ಕು ಪರಿಚಯ:
2000ರಲ್ಲಿ ಕೆನಡಾದಲ್ಲಿ ಜನಿಸಿದ ಬಿಯಾಂಕಾ ಆಂಡ್ರೀಸ್ಕು, 2015ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟರು. 5 ಅಡಿ 7 ಇಂಚು ಎತ್ತರ ಇರುವ ಬಿಯಾಂಕಾ ಕೇವಲ 4 ವರ್ಷಗಳ ಟೆನಿಸ್ ಆಟದಲ್ಲಿ ಗ್ರ್ಯಾಂಡ್‌ಸ್ಲಾಂ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 2019ರಲ್ಲಿ ಆಂಡ್ರೀಸ್ಕು 2 ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದರು. ಇದೇ ವರ್ಷ ರೋಜರ್ಸ್‌ ಕಪ್ ಟೆನಿಸ್ ಟೂರ್ನಿಯಲ್ಲಿ ಬಿಯಾಂಕಾ ಆಂಡ್ರೀಸ್ಕು, ಸೆರೆನಾರನ್ನು ಮಣಿಸಿ ಚಾಂಪಿಯನ್ ಆಗಿದ್ದರು.

ಸೆರೆನಾಗೆ ಆಘಾತ
10ನೇ ಬಾರಿ ಯುಎಸ್ ಓಪನ್ ಫೈನಲ್‌ಗೇರಿದ್ದ 23 ಗ್ರ್ಯಾಂಡ್‌ಸ್ಲಾಂ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್, ಫೈನಲ್‌ನಲ್ಲಿ ತಮಗಿಂತ 19 ವರ್ಷ ಸಣ್ಣ ವಯಸ್ಸಿನ ಆಟಗಾರ್ತಿ ಎದುರು ಪರಾಭವ ಹೊಂದಿದರು. 1995ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟ ಸೆರೆನಾ, 1999ರಲ್ಲಿ ಮೊದಲ ಬಾರಿ ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಂನಲ್ಲಿ ಚಾಂಪಿಯನ್ ಆಗಿದ್ದರು.

23 ಗ್ರ್ಯಾಂಡ್‌ಸ್ಲಾಂ ಗೆದ್ದ ಬಳಿಕ 2018ರ ವಿಂಬಲ್ಡನ್‌ನಲ್ಲಿ ಆ್ಯಂಜೆಲಿಕ್ಯೂ ಕೆರ್ಬರ್ ಎದುರು ಸೋತಿದ್ದ ಸೆರೆನಾ, ಯುಎಸ್ ಓಪನ್ ಫೈನಲ್‌ನಲ್ಲಿ ಜಪಾನ್‌ನ ನವೊಮಿ ಒಸಾಕ ವಿರುದ್ಧ ಪರಾಭವ ಹೊಂದಿದ್ದರು.
2019ರ ವಿಂಬಲ್ಡನ್ ನಲ್ಲಿ ಸಿಮೊನಾ ಹಾಲೆಪ್ ಎದುರು, ಇದೀಗ ಯುಎಸ್ ಓಪನ್‌ನಲ್ಲಿ ಬಿಯಾಂಕಾ ಆಂಡ್ರೀಸ್ಕು ವಿರುದ್ಧ ಸೋತು ನಿರಾಸೆ ಅನುಭವಿಸಿದ್ದಾರೆ. ತಾಯಿಯಾದ ಬಳಿಕ ಮೊದಲ ಬಾರಿ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಸೆರೆನಾ ಅವರ ಕನಸು ಈ ಬಾರಿಯೂ ಈಡೇರಲಿಲ್ಲ. ಒಂದೊಮ್ಮೆ ಈ ಬಾರಿ ಸೆರೆನಾ ಗೆದ್ದಿದ್ದರೆ, ತಾಯಿಯಾದ ಬಳಿಕ ಗ್ರ್ಯಾಂಡ್‌ಸ್ಲಾಂ ಗೆದ್ದ ಮಾರ್ಗರೇಟ್ ಕೋರ್ಟ್, ಇವೊನ್ನೆ ಗೂಲಾಗೊಂಗ್ ಕಾವ್ಲೇ ಹಾಗೂ ಕಿಮ್ ಕ್ಲಿಜೆಸ್ಟರ್ಸ್ ಅವರೊಂದಿಗೆ ಸ್ಥಾನ ಪಡೆಯುತ್ತಿದ್ದರು. ಸದ್ಯ ಮಹಿಳಾ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ಗ್ರ್ಯಾಂಡ್‌ಸ್ಲಾಂ ಗೆದ್ದವರ ಪಟ್ಟಿಯಲ್ಲಿ ಮಾರ್ಗರೇಟ್ ಕೋರ್ಟ್ (24) ಮೊದಲ ಸ್ಥಾನದಲ್ಲಿದ್ದರೆ, ಸೆರೆನಾ 23 ಗ್ರ್ಯಾಂಡ್‌ಸ್ಲಾಂ ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
 

Follow Us:
Download App:
  • android
  • ios