ನ್ಯೂಯಾರ್ಕ್(ಆ.30) :ನೆತ್ತಿ ಸುಡುತ್ತಿರುವ 38 ಡಿಗ್ರಿ ಬಿಸಿಲಿನ ತಾಪಕ್ಕೆ ವಿಶ್ವ ಟೆನಿಸ್ ತಾರೆಗಳು ಹೈರಾಣಾಗಿದ್ದಾರೆ. ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್‌ನಲ್ಲಿ ಬಿಸಿಲಿನ ಝಳ ದಿನೇ ದಿನೆ ಏರತೊಡಗಿದೆ. ಇದರ ಮಧ್ಯೆಯೇ ದಿಗ್ಗಜ ಟೆನಿಸಿಗರು ಶುಭಾರಂಭ ಮಾಡುತ್ತಿದ್ದಾರೆ.

ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಜೋಕೋವಿಚ್, ಹಂಗೇರಿಯ ಮಾರ್ಟನ್ ಫುಕ್ಸೊವಿಕ್ಸ್ ಎದುರು 6-3, 3-6, 6-4, 6-0 ಸೆಟ್‌ಗಳಲ್ಲಿ ಜಯ
ಸಾಧಿಸಿದರು. ದಾಖಲೆ ಗ್ರ್ಯಾಂಡ್ ಸ್ಲಾಮ್ ವಿಜೇತ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್, ಜಪಾನ್‌ನ ನಿಶಿಯೊಕಾ ವಿರುದ್ಧ 6-2, 6-2, 6-4 ಸೆಟ್‌ಗಳಲ್ಲಿ ಗೆಲುವು ಪಡೆದರು. 
 

ಶರಪೋವಾಗೆ ಜಯ: ಮಹಿಳಾ ಸಿಂಗಲ್ಸ್‌ನಲ್ಲಿ ರಷ್ಯಾದ ಮರಿಯಾ ಶರಪೋವಾ 6-2, 7-6(8-6) ಸೆಟ್‌ಗಳಲ್ಲಿ ಸ್ವಿಜರ್‌ಲೆಂಡ್‌ನ ಪ್ಯಾಟಿ ಸ್ಕೈಡರ್ ಎದುರು ಜಯಿಸಿ 2ನೇ ಸುತ್ತಿಗೇರಿದರು. ಇನ್ನುಳಿದಂತೆ ಮ್ಯಾಡಿಸನ್ ಕೀಸ್, ಬುಚಾರ್ಡ್ 2ನೇ ಸುತ್ತಿಗೇರಿದರು. ಮೊದಲ ಸುತ್ತಲ್ಲೇ ಯೂಕಿ ಔಟ್: ಭಾರತದ ಯೂಕಿ ಭಾಂಬ್ರಿ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸೋತು ಹೊರ ಬಿದ್ದಿದ್ದಾರೆ. ಯೂಕಿ 3-6, 6-7, 5-7 ಸೆಟ್‌ಗಳಲ್ಲಿ ಫ್ರಾನ್ಸ್‌ನ ಪಿಯರ್ ಹರ್ಬರ್ಟ್ ಎದುರು ಸೋತರು. 

ಅಂಗಳದಲ್ಲಿ ಬಟ್ಟೆ ಬದಲಿಸಿದ ಕಾರ್ನೆಟ್: ಪಂದ್ಯ ನಡೆಯುವಾಗಲೇ ಟೀ ಶರ್ಟ್ ಉಲ್ಟಾ ಆಗಿತ್ತೆಂದು ಸರಿಯಾಗಿಸಿಕೊಂಡ ಫ್ರಾನ್ಸ್‌ನ ಟೆನಿಸ್ ಆಟಗಾರ್ತಿ ಅಲೀಸ್ ಕಾರ್ನೆಟ್‌ಗೆ ದಂಡ ಹಾಕಲಾಗಿದೆ. ಬಿಸಿಲಿನ ತಾಪ ಹೆಚ್ಚಿದ್ದರಿಂದ 10 ನಿಮಿಷಗಳ ವಿರಾಮ ಪಡೆದಿದ್ದ ಕಾರ್ನೆಟ್ ಟೀ ಶರ್ಟ್ ಬದಲಿಸಿದ್ದರು.

 

 

ಅಂಗಳಕ್ಕೆ ಬಂದ ಬಳಿಕ ಟೀ ಶರ್ಟ್ ಉಲ್ಟಾ ಆಗಿದೆ ಎಂದು ಅಲ್ಲಿಯೇ ಬಿಚ್ಚಿ ಸರಿಪಡಿಸಿಕೊಂಡಿದ್ದರು.  ಈ ಘಟನೆ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದೆ. ವಿಶ್ವ 31ನೇ  ರ‍್ಯಾಂಕಿಂಗ್‌  ಆಟಗಾರ್ತಿ ಕಾರ್ನೆಟ್, ಸ್ವೀಡನ್‌ನ ಜೊಹನ್ನಾ ಲಾರ‌್ಸನ್ ಎದುರು ಮೊದಲ ಸುತ್ತಿನಲ್ಲಿ ಸೋತರು.