ಯುಎಸ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಆಗಸ್ಟ್ 19ರಿಂದ ಎರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. 4 ಗೇಮ್‌ಗಳ ಸೆಟ್‌ಗಳು, 10 ಅಂಕಗಳ ಟೈಬ್ರೇಕರ್ ಮತ್ತು 16 ತಂಡಗಳು ಮಾತ್ರ ಸ್ಪರ್ಧಿಸಲಿವೆ. ವಿಜೇತರಿಗೆ 8.6 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಫೈನಲ್‌ನಲ್ಲಿ ಮಾತ್ರ 6 ಗೇಮ್‌ಗಳ 3 ಸೆಟ್‌ಗಳ ಸಾಂಪ್ರದಾಯಿಕ ಸ್ವರೂಪ ಮುಂದುವರಿಯಲಿದೆ.
ನ್ಯೂಯಾರ್ಕ್: ಈ ಬಾರಿ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಹಲವು ಮಹತ್ವದ ಬದಲಾವಣೆಗಳು ಕಂಡುಬರಲಿವೆ. ಟೂರ್ನಿ ಆ.24ರಿಂದ ಆರಂಭಗೊಳ್ಳಲಿದ್ದರೂ, ಮಿಶ್ರ ಡಬಲ್ಸ್ ಸ್ಪರ್ಧೆಗಳು ಒಂದು ವಾರ ಮೊದಲೇ ಅಂದರೆ ಆ.19ಕ್ಕೆ ಶುರುವಾಗಲಿದೆ. ಆಸಕ್ತಿದಾಯಕ ವಿಚಾರ ಏನೆಂದರೆ ಕೇವಲ 2 ದಿನ(ಆ.19, 20)ಗಳಲ್ಲೇ ಮಿಶ್ರ ಡಬಲ್ಸ್ ಸ್ಪರ್ಧೆ ಮುಕ್ತಾಯಗೊಳ್ಳಲಿದೆ.
ಇನ್ನು, ಗೇಮ್ಸ್‌ನ ಅಂಕದಲ್ಲೂ ಬದಲಾವಣೆ ಇರಲಿದೆ. ಸಾಮಾನ್ಯವಾಗಿ 6 ಗೇಮ್‌ಗಳ 3 ಸೆಟ್ ಆಡಿಸಲಾಗುತ್ತಿದ್ದರೂ, ಈ ಬಾರಿ 4 ಗೇಮ್‌ಗಳ ಪಂದ್ಯ ನಡೆಸಲು ನಿರ್ಧರಿಸಲಾಗಿದೆ. 2 ಸೆಟ್‌ಗಳ ಬಳಿಕ ಟೈ ಆದರೆ 10 ಅಂಕಗಳ ಟೈ ಬ್ರೇಕರ್ ಆಡಿಸಲಾಗುತ್ತದೆ. ಆದರೆ ಫೈನಲ್ ಪಂದ್ಯದಲ್ಲಿ 6 ಗೇಮ್‌ಗಳ 3 ಸೆಟ್ ಇರಲಿವೆ. ಕಳೆದ ಬಾರಿ 32 ತಂಡಗಳು ಆಡಿದ್ದರೆ, ಈ ಬಾರಿ ಕೇವಲ 16 ತಂಡಗಳು ಸ್ಪರ್ಧಿಸಲಿವೆ.
ಟೂರ್ನಿಯ ನಗದು ಬಹುಮಾನದಲ್ಲೂ ಹೆಚ್ಚಳ ಮಾಡಲಾಗಿದೆ. ಈ ಬಾರಿ ಮಿಶ್ರ ಡಬಲ್ಸ್ ವಿಜೇತರಿಗೆ 1 ಮಿಲಿಯನ್ ಯುಎಸ್ ಡಾಲರ್(8.6 ಕೋಟಿ ರು.) ಸಿಗಲಿದೆ. ಕಳೆದ ಬಾರಿ ₹1.73 ಕೋಟಿ ನೀಡಲಾಗಿತ್ತು.
ಖೋ ಖೋ: ಪ್ರೋತ್ಸಾಹ ಧನ ಹೆಚ್ಚಿಸಲು ಸರ್ಕಾರಕ್ಕೆ ಮನವಿ
ಬೆಂಗಳೂರು: ಖೋ ಖೋ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಕರ್ನಾಟಕದ ಇಬ್ಬರಿಗೆ ರಾಜ್ಯ ಸರ್ಕಾರ ಘೋಷಿಸಿದ ಬಹುಮಾನ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಭಾನುವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಬೆಂಗಳೂರು ನಗರ ಖೋ-ಖೋ ಸಂಸ್ಥೆ ಮನವಿ ಸಲ್ಲಿಸಿದೆ. ಅಂತಾರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆಲ್ಲುವ ಸ್ಪರ್ಧಿಗಳಿಗೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವಂತೆ ನಮ್ಮ ರಾಜ್ಯದಲ್ಲೂ ‘ಎ’, ‘ಬಿ’ ದರ್ಜೆ ಹುದ್ದೆ ನೀಡಿ, ಕನಿಷ್ಠ ₹50 ಲಕ್ಷ ನಗದು ಬಹುಮಾನ ನೀಡಬೇಕು ಎಂದು ಸಂಸ್ಥೆ ಆಗ್ರಹಿಸಿದೆ. ಈ ವೇಳೆ ಸಂಸ್ಥೆ ಕಾರ್ಯದರ್ಶಿ ಜೋಸೆಫ್ ವೇದ ಕುಮಾರ್ ಸೇರಿ ಹಲವರು ಉಪಸ್ಥಿತರಿದ್ದರು.
