US Open 2022 ಕ್ಯಾರೋಲಿನ್ ಗಾರ್ಸಿಯಾ ಮಣಿಸಿ ಒನ್ಸ್ ಜಬುರ್ ಫೈನಲ್‌ಗೆ ಲಗ್ಗೆ..!
ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಒನ್ಸ್ ಜಬುರ್ ಫೈನಲ್‌ಗೆ ಲಗ್ಗೆ
ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ ಎದುರು ಸುಲಭ ಗೆಲುವು'
ವರ್ಷದಲ್ಲಿ ಸತತ ಎರಡನೇ ಬಾರಿಗೆ ಗ್ರ್ಯಾನ್ ಸ್ಲಾಂ ಫೈನಲ್ ಪ್ರವೇಶಿಸಿದ ಒನ್ಸ್ ಜಬುರ್
ನ್ಯೂಯಾರ್ಕ್(ಸೆ.09): ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಟ್ಯುನೇಷಿಯಾದ ಒನ್ಸ್ ಜಬುರ್ ಪ್ರಸಕ್ತ ವರ್ಷದಲ್ಲಿ ಗ್ರ್ಯಾನ್ ಸ್ಲಾಂನಲ್ಲಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. 5ನೇ ಶ್ರೇಯಾಂಕಿತ ಆಟಗಾರ್ತಿ ಒನ್ಸ್ ಜಬುರ್, ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ ಎದುರು 6-1, 6-3 ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಭರ್ಜರಿಯಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
28 ವರ್ಷದ ಒನ್ಸ್ ಜಬುರ್, ಕಳೆದ ಜುಲೈನಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಗ್ರ್ಯಾನ್ ಸ್ಲಾಂನಲ್ಲಿ ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ 1968ರ ಬಳಿಕ ಯುಎಸ್ ಓಪನ್ ಫೈನಲ್ ಪ್ರವೇಶಿಸಿದ ಆಫ್ರಿಕಾ ಮೂಲದ ಮೊದಲ ಮಹಿಳಾ ಸಿಂಗಲ್ಸ್ ಆಟಗಾರ್ತಿ ಎನ್ನುವ ಹಿರಿಮೆಗೆ ಒನ್ಸ್ ಜಬುರ್ ಪಾತ್ರರಾಗಿದ್ದಾರೆ. ಯುಎಸ್ ಓಪನ್ ಫೈನಲ್‌ಗೆ ಲಗ್ಗೆಯಿಟ್ಟ ಬಳಿಕ ಮಾತನಾಡಿರುವ ಒನ್ಸ್ ಜಬುರ್, ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಪ್ರದರ್ಶನದ ಬಳಿಕ ನನ್ನ ಮೇಲೆ ಸಾಕಷ್ಟು ಒತ್ತಡವಿತ್ತು. ಆದರೆ ನನ್ನ ಸಾಮರ್ಥ್ಯದ ಮೇಲೆ ನನಗೆ ವಿಶ್ವಾಸವಿತ್ತು ಎಂದು ಟ್ಯುನೇಷಿಯಾದ ಆಟಗಾರ್ತಿ ಹೇಳಿದ್ದಾರೆ.
ಕಳೆದೆರಡು ತಿಂಗಳ ಹಿಂದಷ್ಟೇ ಒನ್ಸ್ ಜಬುರ್, ವಿಂಬಲ್ಡನ್ ಫೈನಲ್ ಪ್ರವೇಶಿಸುವ ಮೂಲಕ ಈ ಸಾಧನೆ ಮಾಡಿದ ಆಫ್ರಿಕಾದ ಹಾಗೂ ಅರಬ್‌ನ ಮೊದಲ ಮಹಿಳಾ ಸಿಂಗಲ್ಸ್ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಆದರೆ ವಿಂಬಲ್ಡನ್ ಫೈನಲ್‌ನಲ್ಲಿ ಎಲೆನಾ ರೈಬಾಕಿನಾ ಎದುರು ಮುಗ್ಗರಿಸುವ ಮೂಲಕ ಚೊಚ್ಚಲ ಗ್ರ್ಯಾನ್ ಸ್ಲಾಂ ಜಯಿಸುವ ಅವಕಾಶ ಕೈಚೆಲ್ಲಿದ್ದರು. ಆದರೆ ಇದೀಗ ಯುಎಸ್ ಓಪನ್‌ನಲ್ಲಿ ಟ್ರೋಫಿಗೆ ಮುತ್ತಿಕ್ಕುವ ಕನಸು ಕಾಣುತ್ತಿದ್ದಾರೆ ಆಫ್ರಿಕಾ ಮೂಲದ ಟೆನಿಸ್ ಆಟಗಾರ್ತಿ.
ಸೆಮೀಸ್‌ಗೆ ಕಾರ್ಲೊಸ್, ಇಗಾ
ಯುಎಸ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಸೆಮಿಫೈನಲ್ ವೇಳಾಪಟ್ಟಿಅಂತಿಮಗೊಂಡಿದೆ. ಪುರುಷರ ಸಿಂಗಲ್ಸ್‌ನ 4ನೇ ಹಾಗೂ ಅಂತಿಮ ಕ್ವಾರ್ಟರ್ ಫೈನಲ್‌ನಲ್ಲಿ 19 ವರ್ಷದ ಸ್ಪೇನ್‌ನ ಕಾರ್ಲೊಸ್ ಆಲ್ಕರಜ್ ಇಟಲಿಯ ಜಾನ್ನಿಕ್ ಸಿನ್ನರ್ ವಿರುದ್ಧ 6-3,6-7,6-7(0),7-5,6-3 ಸೆಟ್‌ಗಳಲ್ಲಿ ಜಯಗಳಿಸಿ ಸೆಮೀಸ್ ಪ್ರವೇಶಿಸಿದ್ದಾರೆ.ಬರೋಬ್ಬರಿ 5 ಗಂಟೆ 15 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜಯಭೇರಿ ಬಾರಿಸಿದ ಕಾರ್ಲೊಸ್ ತಾವು ಭವಿಷ್ಯದ ತಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. ಇದರೊಂದಿಗೆ ಚೊಚ್ಚಲ ಬಾರಿಗೆ ಗ್ರ್ಯಾನ್ ಸ್ಲಾಂಗೇರಿದ ಸಾಧನೆ ಮಾಡಿದ್ದಲ್ಲದೇ 1990ರಲ್ಲಿ ಪೀಟ್ ಸ್ಯಾಂಪ್ರಸ್ ಬಳಿಕ ಅಂತಿಮ 4ರ ಸುತ್ತು ಪ್ರವೇಶಿಸಿದ ಅತಿಕಿರಿಯ ಆಟಗಾರ ಎನಿಸಿಕೊಂಡರು.
US Open 2022: ಸೆಮೀಸ್‌ಗೆ ಲಗ್ಗೆಯಿಟ್ಟ ವಿಶ್ವ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್
ಇನ್ನು ಮಹಿಳಾ ಸಿಂಗಲ್ಸ್‌ನ ಅಂತಿಮ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್, 8ನೇ ಶ್ರೇಯಾಂಕಿತೆ ಅಮೆರಿಕದ ಜೆಸ್ಸಿಕಾ ಪೆಗುಲಾ ವಿರುದ್ಧ 6-3, 7-6 ಸೆಟ್‌ಗಳಲ್ಲಿ ಗೆಲುವು ಪಡೆದರು. ಇದಕ್ಕೂ ಮೊದಲು ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ 6-1, 7-6 ಸೆಟ್‌ಗಳಲ್ಲಿ ಜಯಿಸಿದ ಬೆಲಾರುಸ್‌ನ ಆಯ್ರ್ನಾ ಸಬಲೆಂಕಾ ಸೆಮಿಫೈನಲ್ ಪ್ರವೇಶಿಸಿದರು.
ಇಂದು, ನಾಳೆ ಸೆಮಿಫೈನಲ್
ಶುಕ್ರವಾರ ನಡೆಯಲಿರುವ 2ನೇ ಸೆಮೀಸ್‌ನಲ್ಲಿ ಇಗಾ ಸ್ವಿಯಾಟೆಕ್ ಹಾಗೂ ಆಯ್ರ್ನಾ ಸಬಲೆಂಕಾ ಮುಖಾಮುಖಿಯಾಗಲಿದ್ದಾರೆ. ಶನಿವಾರ ಪುರುಷರ ಸಿಂಗಲ್ಸ್ ಸೆಮಿಫೈನಲ್‌ಗಳು ನಡೆಯಲಿದ್ದು ಮೊದಲ ಸೆಮೀಸ್‌ನಲ್ಲಿ ನಾರ್ವೆಯ ಕ್ಯಾಸ್ಪರ್ ರುಡ್ ಹಾಗೂ ರಷ್ಯಾದ ಕಾರೆನ್ ಖಚನೊವ್ ಎದುರಾಗಲಿದ್ದಾರೆ. 2ನೇ ಸೆಮೀಸ್‌ನಲ್ಲಿ ಕಾರ್ಲೊಸ್ ಆಲ್ಕರಜ್ ಹಾಗೂ ಫ್ರಾನ್ಸೆಸ್ ಟಿಯಾಫೋ ಸೆಣಸಲಿದ್ದಾರೆ.