Asianet Suvarna News Asianet Suvarna News

US Open 2022: ವಿಶ್ವ ನಂ.1 ಡ್ಯಾನಿಲ್ ಮೆಡ್ವೆಡೆವ್‌ಗೆ ಸೋಲುಣಿಸಿದ ನಿಕ್ ಕಿರಿಯೋಸ್

ಯುಎಸ್ ಓಪನ್ ಗ್ರ್ಯಾನ್‌ ಸ್ಲಾಂನಲ್ಲಿ ಹಾಲಿ ಚಾಂಪಿಯನ್‌ ಡ್ಯಾನಿಲ್ ಮೆಡ್ವೆಡೆವ್ ಹೋರಾಟ ಅಂತ್ಯ
ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ನಿಕ್‌ ಕಿರಿಯೋಸ್ ಎದುರು ಸೋಲುಂಡ ಡ್ಯಾನಿಲ್ ಮೆಡ್ವೆಡೆವ್
ಆಸ್ಟ್ರೇಲಿಯನ್ ಓಪನ್ ಸೋಲಿಗೆ ತಿರುಗೇಟು ನೀಡಿದ ನಿಕ್ ಕಿರಿಯೋಸ್

US Open 2022 Nick Kyrgios stuns defending Champion Daniil Medvedev to reach Quarter Final kvn
Author
First Published Sep 5, 2022, 9:54 AM IST

ನ್ಯೂಯಾರ್ಕ್(ಸೆ.05): ಯುಎಸ್ ಓಪನ್‌ ಪುರುಷರ ಸಿಂಗಲ್ಸ್‌ನಲ್ಲಿ ಮತ್ತೊಮ್ಮೆ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ವಿಶ್ವದ ನಂ.1 ಶ್ರೇಯಾಂಕಿತ ಟೆನಿಸಿಗ ಹಾಗೂ ಹಾಲಿ ಚಾಂಪಿಯನ್‌ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ ಅವರನ್ನು ರೋಚಕವಾಗಿ ಮಣಿಸುವಲ್ಲಿ ಆಸ್ಟ್ರೇಲಿಯಾದ ನಿಕ್‌ ಕಿರಿಯೋಸ್‌ ಯಶಸ್ವಿಯಾಗಿದ್ದಾರೆ. ಯುಎಸ್ ಓಪನ್‌ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ 7-6(11), 3-6, 6-3,6-2 ಸೆಟ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಡ್ಯಾನಿಲ್ ಮೆಡ್ವೆಡೆವ್‌ ಅವರನ್ನು ಮಣಿಸಿದ ಬಳಿಕ ತುಂಬಿದ ಆರ್ಥರ್ ಆಶ್ಲೆ ಸ್ಟೇಡಿಯಂನಲ್ಲಿ ಮಾತನಾಡಿದ ನಿಕ್ ಕಿರಿಯೋಸ್, ಇದೊಂದು ನಿಜಕ್ಕೂ ಅದ್ಭುತ ಮ್ಯಾಚ್ ಆಗಿತ್ತು ಎಂದು ಬಣ್ಣಿಸಿದ್ದಾರೆ. ಡ್ಯಾನಿಲ್ ಮೆಡ್ವೆಡೆವ್‌ ಅವರು ಟೂರ್ನಿಯ ಹಾಲಿ ಚಾಂಪಿಯನ್ ಆಗಿದ್ದರು. ಹೀಗಾಗಿ ಅವರ ಮೇಲೆ ಸಹಜವಾಗಿಯೇ ಸಾಕಷ್ಟು ಒತ್ತಡವಿತ್ತು. ಆದರೆ ನಾನು ಚೆನ್ನಾಗಿ ಆಡಿದೆ. ನಾನು ಕಳೆದ ಕೆಲವು ತಿಂಗಳುಗಳಿಂದ ಅದ್ಭುತವಾಗಿಯೇ ಆಡುತ್ತಿದ್ದೇನೆ. ನ್ಯೂಯಾರ್ಕ್‌ನಲ್ಲಿ ಪ್ರತಿಭೆ ಅನಾವರಣ ಮಾಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ನಿಕ್ ಕಿರಿಯೋಸ್ ಹೇಳಿದ್ದಾರೆ.

2022ರ ಮೊದಲ ಗ್ರ್ಯಾನ್‌ ಸ್ಲಾಂ ಎನಿಸಿಕೊಂಡ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡನೇ ಸುತ್ತಿನಲ್ಲಿ ನಿಕ್‌ ಕಿರಿಯೋಸ್ ಎದುರು ಡ್ಯಾನಿಲ್ ಮೆಡ್ವೆಡೆವ್‌ ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ ಇದೀಗ ಯುಎಸ್ ಓಪನ್‌ನಲ್ಲಿ ರಷ್ಯಾದ ಆಟಗಾರನಿಗೆ ತಿರುಗೇಟು ನೀಡುವಲ್ಲಿ ನಿಕ್ ಕಿರಿಯೋಸ್ ಯಶಸ್ವಿಯಾಗಿದ್ದಾರೆ.

23ನೇ ಶ್ರೇಯಾಂಕಿತ ನಿಕ್‌ ಕಿರಿಯೋಸ್ ಇದೀಗ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ 27ನೇ ಶ್ರೇಯಾಂಕಿತ ಕರೀನ್ ಕಚನೋವ್ ಅವರನ್ನು ಎದುರಿಸಲಿದ್ದಾರೆ. ಕರೀನ್ ಕಚನೋವ್ ಎದುರು ನಿಕ್ ಕಿರಿಯೋಸ್ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದಾರೆ. 

Serena Williams: ಯುಎಸ್‌ ಓಪನ್‌ ಮೂರನೇ ಸುತ್ತಿನಲ್ಲೇ ಸೆರೆನಾ ಔಟ್, ಟೆನಿಸ್ ಬದುಕಿಗೆ ವಿದಾಯ..!

ಮೂರನೇ ಸುತ್ತು ಪ್ರವೇಶಿಸಿದ ರಾಫೆಲ್ ನಡಾಲ್‌:

23ನೇ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ ಯುಎಸ್‌ ಓಪನ್‌ ಪುರುಷರ ಸಿಂಗಲ್ಸ್‌ 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ. 3ನೇ ಸುತ್ತಿನ ಪಂದ್ಯದಲ್ಲಿ ರಿಚರ್ಡ್‌ ಗ್ಯಾಸ್ಕೆಟ್‌ ವಿರುದ್ಧ 6-0, 6-1, 7-5 ಸೆಟ್‌ಗಳಲ್ಲಿ ಗೆದ್ದ ರಾಫೆಲ್ ನಡಾಲ್‌, ಫ್ರಾನ್ಸ್‌ ಆಟಗಾರನ ವಿರುದ್ಧ ಗೆಲುವು-ಸೋಲಿನ ದಾಖಲೆಯನ್ನು 18-0ಗೆ ಏರಿಸಿಕೊಂಡರು. ಪಂದ್ಯದ ಮೊದಲ 9 ಗೇಮ್‌ಗಳನ್ನು ಗೆದ್ದ ನಡಾಲ್‌ ನಿರಾಯಾಸವಾಗಿ ಪಂದ್ಯ ಜಯಿಸಿದರು. 2022ರಲ್ಲಿ ಇದು ನಡಾಲ್‌ಗೆ ಗ್ರ್ಯಾನ್‌ಸ್ಲಾಂಗಳಲ್ಲಿ ಸತತ 22ನೇ ಗೆಲುವು. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅಮೆರಿಕದ ಫ್ರಾನ್ಸೆಸ್‌ ಟಿಯಾಫೆä ವಿರುದ್ಧ ಆಡಲಿದ್ದಾರೆ.

ಇನ್ನು ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಅಮೆರಿಕದ ಲಾರೆನ್‌ ಡೇವಿಸ್‌ ವಿರುದ್ಧ 6-3, 6-4 ಸೆಟ್‌ಗಳಲ್ಲಿ ಜಯಗಳಿಸಿದರು. ಪ್ರಿ ಕ್ವಾರ್ಟರ್‌ನಲ್ಲಿ ಸ್ವಿಯಾಟೆಕ್‌ಗೆ ಜರ್ಮನಿಯ ಜ್ಯೂಲ್‌ ನಿಯಾಮೆರ್‌ ಎದುರಾಗಲಿದ್ದಾರೆ.

Follow Us:
Download App:
  • android
  • ios