ನಿತಿನ್ ತೋಮರ್ ಕಡೆ ಕ್ಷಣಗಳಲ್ಲಿ ಮಾಡಿದ ಯಶಸ್ವಿ ರೈಡ್'ಗಳ ನೆರವಿನಿಂದ ಯುಪಿ ಯೋಧಾ ತಂಡವು ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ.

ನಾಗ್ಪುರ(ಆ.05): ನಾಯಕ ನಿತಿನ್ ತೋಮರ್ ಹಾಗೂ ರಿಷಾಂಕ್ ದೇವಾಡಿಗ ಅವರ ಪ್ರಭಾವಿ ಪ್ರದರ್ಶನದ ನೆರವಿನಿಂದ ಯುಪಿ ಯೋಧಾ ತಂಡವು ಬೆಂಗಳೂರು ಬುಲ್ಸ್ ವಿರುದ್ಧ ಜಯಭೇರಿ ಬಾರಿಸಿದೆ.

ಇಲ್ಲಿನ ಮಂಕಾಪುರ್ ಒಳಾಂಗಣ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರಂಭದಿಂದಲೂ ಆಕ್ರಮಣಕಾರಿಯಾಟವಾಡಿದ ನಿತಿನ್ ತೋಮರ್ ಪಡೆ ಮೊದಲಾರ್ಧ ಮುಕ್ತಾಯದ ವೇಳೆಗೆ 18-8 ಅಂಕಗಳ ಮುನ್ನಡೆ ಸಾಧಿಸಿತ್ತು.

10 ಅಂಕಗಳ ಹಿನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಬೆಂಗಳೂರು ಬುಲ್ಸ್ ತಂಡ ನಾಯಕ ರೋಹಿತ್ ಕುಮಾರ್ ಯಶಸ್ವಿ ರೈಡಿಂಗ್'ಗಳ ನೆರವಿನಿಂದ 32ನೇ ನಿಮಿಷದಲ್ಲಿ 21-25 ಅಂಕಗಳ ಮೂಲಕ ಅಂತರವನ್ನು ತಗ್ಗಿಸಿದರು. ಆದರೆ ನಿತಿನ್ ತೋಮರ್ ಕಡೆ ಕ್ಷಣಗಳಲ್ಲಿ ಮಾಡಿದ ಯಶಸ್ವಿ ರೈಡ್'ಗಳ ನೆರವಿನಿಂದ ಯುಪಿ ಯೋಧಾ ತಂಡವು ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. ರೋಹಿತ್ ಕುಮಾರ್ ನೇತೃತ್ವದ ಬೆಂಗಳೂರು ಬುಲ್ಸ್ ಮೊದಲ ಸೋಲಿನ ರುಚಿ ಕಂಡಿತು.