ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಭಾರತ ಇಂದಿನಿಂದ ಅಭ್ಯಾಸ ಪಂದ್ಯ ಆಡಲಿದೆ. ಆದರೆ ಕಳಪೆ ಪಿಚ್ ಹಾಗೂ ಮೈದಾನದಿಂದ 4 ದಿನದ ಅಭ್ಯಾಸ ಪಂದ್ಯವನ್ನ ಮೂರೇ ದಿನಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಅಷ್ಕಕ್ಕೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಭಾರತಕ್ಕೆ ಕಳಪೆ ಪಿಚ್ ನೀಡಿದ್ದೇಕೆ? ಇಲ್ಲಿದೆ.
ಚೆಲ್ಸ್ಮ್‌ಫೋರ್ಡ್ (ಜು.25): ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದು ಬೀಗಿದ್ದ ಭಾರತ, ಏಕದಿನ ಸರಣಿಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ ಹೊರತಾಗಿಯೂ ಟ್ರೋಫಿ ಗೆಲ್ಲುವಲ್ಲಿ ವಿಫಲಗೊಂಡಿತ್ತು. ಇದೀಗ ಅಸಲಿ ಸವಾಲು ಟೆಸ್ಟ್ ಸರಣಿ ವೇಳೆ ಎದುರಾಗಲಿದ್ದು, ಅದಕ್ಕಾಗಿ ಬುಧವಾರದಿಂದ(ಜು.25) ವಿರಾಟ್ ಕೊಹ್ಲಿ ಪಡೆ ಅಭ್ಯಾಸ ಪಂದ್ಯವನ್ನಾಡಲಿದೆ.
ಆ.1ರಿಂದ 5 ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನ ಇಲ್ಲಿ ಎಸೆಕ್ಸ್ ಕೌಂಟಿ ತಂಡದ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯ ನಿಗದಿಯಾಗಿತ್ತು. ಆದರೀಗ, ಒಂದು ದಿನ ಕಡಿತಗೊಳಿಸಲಾಗಿದ್ದು ಪಂದ್ಯ ಮೂರು ದಿನ ನಡೆಯಲಿದೆ.
ಕಾರಣವೇನು?: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೂ ಮೊದಲೇ ಭಾರತ ತಂಡಕ್ಕೆ ಸಮಸ್ಯೆಗಳು ಎದುರಾಗಿವೆ. ಒಂದು ಕಡೆ ಪ್ರಮುಖ ಬೌಲರ್‌ಗಳು ಗಾಯಗೊಂಡು ಹೊರಗುಳಿದಿದ್ದರೆ, ಮತ್ತೊಂದೆಡೆ ಅಭ್ಯಾಸಕ್ಕೆ ಸಮಸ್ಯೆ ಎದುರಾಗಿದೆ. ಅಭ್ಯಾಸ ಪಂದ್ಯಕ್ಕಾಗಿ ಸಿದ್ಧಪಡಿಸಿರುವ ಪಿಚ್ ಹಾಗೂ ಔಟ್‌ಫೀಲ್ಡ್ ಸ್ಥಿತಿ ಭಾರತ ತಂಡದ ಆಡಳಿತ ಮಂಡಳಿ , ಪಂದ್ಯವನ್ನು ಮೂರೇ ದಿನಕ್ಕೆ ಸೀಮಿತಗೊಳಿಸುವಂತೆ ಒತ್ತಾಯಿಸಿತು.
ಪಿಚ್ ಸಂಪೂರ್ಣ ಹಸಿಯಾಗಿದ್ದು, ಔಟ್‌ಫೀಲ್ಡ್ ಬರಡಾಗಿದೆ. ಹೀಗಾಗಿ ಆಟಗಾರರು ಗಾಯಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನುವುದನ್ನು ಮನಗಂಡ ಕೋಚ್ ರವಿಶಾಸ್ತ್ರಿ ಹಾಗೂ ಇತರ ಸಹಾಯಕ ಸಿಬ್ಬಂದಿ ಪಂದ್ಯವನ್ನು ಮೂರು ದಿನಕ್ಕಿಳಿಸಲು ನಿರ್ಧರಿಸಿತು.
ಪಂದ್ಯ ನಡೆಯಲಿರುವ ಪಿಚ್ ಪಕ್ಕದಲ್ಲಿದ್ದ ಮತ್ತೆರಡು ಅಭ್ಯಾಸ ಪಿಚ್‌ಗಳು ಸಹ ಬರಡಾಗಿದ್ದ ಕಾರಣ, ಭಾರತ ತಂಡದ ಕೋಚ್‌ಗಳು ಪ್ರಮುಖ ಪಿಚ್ ಮೇಲಿದ್ದ ಹೆಚ್ಚುವರಿ ಹುಲ್ಲನ್ನು ಕತ್ತರಿಸುವಂತೆ ತಿಳಿಸಿದರು. ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಸಿದ್ಧಗೊಳ್ಳಲಿರುವ ಪಿಚ್‌ಗೆ ಹೋಲುವ ರೀತಿಯಲ್ಲಿ ಅಭ್ಯಾಸ ಪಿಚ್ ನಿರ್ಮಿಸುವಂತೆ ಭಾರತ ತಂಡ ಕೇಳಿಕೊಂಡಿತ್ತು. ಆದರೆ ಭಾರತದ ಮನವಿಗೆ ತಕ್ಕ ಮನ್ನಣೆ ದೊರೆತಂತೆ ಕಾಣಲಿಲ್ಲ. ಹೀಗಾಗಿ, ಅಭ್ಯಾಸ ಪಂದ್ಯವನ್ನು ಒಂದು ದಿನ ಮುಂಚಿತವಾಗಿಯೇ ಮುಕ್ತಾಯಗೊಳಿಸಿ ಬರ್ಮಿಂಗ್‌ಹ್ಯಾಮ್‌ಗೆ ಪ್ರಯಾಣಿಸಲು ತಂಡ ನಿರ್ಧರಿಸಿದೆ.
ಪಂದ್ಯಕ್ಕೆ ಎಲ್ಲಾ 15 ಆಟಗಾರರು: ಅಭ್ಯಾಸ ಪಂದ್ಯಕ್ಕೆ ಅಧಿಕೃತ ಪ್ರಥಮ ದರ್ಜೆ ಪಂದ್ಯ ಎನ್ನುವ ಮಾನ್ಯತೆ ಇಲ್ಲದ ಕಾರಣ, ಪಂದ್ಯದಲ್ಲಿ ಎಲ್ಲಾ 15 ಆಟಗಾರರನ್ನು ಆಡಿಸಲು ತಂಡ ನಿರ್ಧರಿಸಿದೆ. ಮಂಗಳವಾರ ತಂಡ ಕಠಿಣ ಅಭ್ಯಾಸ ನಡೆಸಿತು.
ಎರಡು ಬ್ಯಾಚ್‌ಗಳಲ್ಲಿ ಮೈದಾನಕ್ಕೆ ಆಗಮಿಸಿದ ಆಟಗಾರರು ಒಟ್ಟು ಸುಮಾರು 4 ಗಂಟೆಗೂ ಹೆಚ್ಚು ಕಾಲ ನೆಟ್ಸ್‌ನಲ್ಲಿ ಬೆವರು ಹರಿಸಿದರು. ಅಭ್ಯಾಸ ಪಂದ್ಯಕ್ಕೆ ಸಿದ್ಧಗೊಂಡಿರುವ ಪಿಚ್‌ಗೆ ಹೋಲುವ ಪಿಚ್, 5 ಪಂದ್ಯಗಳಲ್ಲಿ ಒಮ್ಮೆಯಾದರೂ ಸಿಗಬಹುದು ಎನ್ನುವ ಉದ್ದೇಶದಿಂದ ಸ್ಪಿನ್ನರ್‌ಗಳಾದ ಆರ್.ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಮೂವರು ಹೆಚ್ಚು ಹೊತ್ತು ಅಭ್ಯಾಸ ನಡೆಸಿದರು.
ಮೂವರು ಸ್ಪಿನ್ನರ್‌ಗಳು ಕೆಲ ಪ್ರಯೋಗಗಳನ್ನು ನಡೆಸಿ, ಸ್ಥಳೀಯ ವಾತಾವರಣಕ್ಕೆ ಸರಿಹೊಂದುವ ರೀತಿಯ ಬಗ್ಗೆ ಚರ್ಚೆ ನಡೆಸುತ್ತಿದ್ದಿದ್ದು ಕಂಡುಬಂತು. ಶಿಖರ್ ಧವನ್ ಶಾರ್ಟ್ ಪಿಚ್ಡ್ ಎಸೆತಗಳನ್ನು ಎದುರಿಸುವ ಕಡೆ ಹೆಚ್ಚು ಗಮನ ಹರಿಸಿದರೆ, ಕೊಹ್ಲಿ ಆಫ್‌ಸ್ಟಂಪ್ ನಿಂದ ಆಚೆ ಹೋಗುವ ಚೆಂಡನ್ನು ಸಮರ್ಥವಾಗಿ ಎದುರಿಸುವುದನ್ನು ಅಭ್ಯಾಸ ನಡೆಸಿದರು. ಎಡಗೈ ಹೆಬ್ಬೆರಳಿಗೆ ದೊಡ್ಡ ಬ್ಯಾಂಡೇಜ್ ಕಟ್ಟಿದ್ದರೂ ವೇಗಿ ಜಸ್‌ಪ್ರೀತ್ ಬೂಮ್ರಾ ನೆಟ್ಸ್‌ನಲ್ಲಿ ಹೆಚ್ಚು ಹೊತ್ತು ಬೌಲ್ ಮಾಡಿದ್ದು ಅಚ್ಚರಿ
ಮೂಡಿಸಿತು. ಬೂಮ್ರಾ ಮೊದಲ ಟೆಸ್ಟ್ ವೇಳೆಗೆ ಸಂಪೂರ್ಣವಾಗಿ ಫಿಟ್ ಆಗಲಿದ್ದಾರೆ ಎನ್ನುವ ವಿಶ್ವಾಸ ತಂಡದ ಆಡಳಿತಕ್ಕಿದೆ ಎನ್ನಲಾಗಿದೆ.
ಕೊಹ್ಲಿ, ಚೇತೇಶ್ವರ್ ಪೂಜಾರ ಹಾಗೂ ಮುರಳಿ ವಿಜಯ್ ಅರ್ಧಗಂಟೆಗೂ ಹೆಚ್ಚು ಸಮಯ ಸ್ಲಿಪ್‌ನಲ್ಲಿ ಕ್ಯಾಚ್ ಅಭ್ಯಾಸ ನಡೆಸಿದರು. ಇಂಗ್ಲೆಂಡ್ ಪ್ರವಾಸದಲ್ಲಿ ತಂಡದ ಪ್ರದರ್ಶನ ಹೇಗಿರಬಹುದು ಎಂಬುದರ ಸುಳಿವನ್ನು ಈ ಅಭ್ಯಾಸ ಪಂದ್ಯ ನೀಡಲಿದ್ದು, ಎಲ್ಲರ ಗಮನ ಪಂದ್ಯದ ಮೇಲಿದೆ.
