ಬೆಂಗಳೂರು(ಫೆ.03): ಪೃಥ್ವಿ ಶಾ ನೇತೃತ್ವದ ಕಿರಿಯರ ಟೀಂ ಇಂಡಿಯಾ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಿರಿಯರ ತಂಡ ಯಶಸ್ಸಿನ ಹಿಂದೆ ಕೋಚ್ ದ್ರಾವಿಡ್ ಪರಿಶ್ರಮವೂ ಸಾಕಷ್ಟಿದೆ. ಕಿರಿಯರ ತಂಡ ಚಾಂಪಿಯನ್ ಆದ ಬಳಿಕ ದ್ರಾವಿಡ್ ತಂಡದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ನಮ್ಮ ತಂಡದ ಸಾಧನೆ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ನಾವು ಕಳೆದ 14 ತಿಂಗಳಿನಿಂದ ಪಟ್ಟ ಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದಂತಾಗಿದೆ. ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೆ ನಮ್ಮ ಹುಡುಗರ ನಿಜಕ್ಕೂ ಅರ್ಹ ಎಂದು 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಈ ಕ್ಷಣ ಸಾಕಷ್ಟು ಕಾಲ ನಮ್ಮ ಹುಡುಗರಿಗೆ ಸ್ಮರಣೀಯವಾಗಿರಲಿದೆ. ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡುವ ಪ್ರತಿಭೆ ಈ ಕ್ರಿಕೆಟಿಗರಲ್ಲಿದ್ದು, ಉನ್ನತ ಹಂತಕ್ಕೆ ಹೋಗುವ ಕ್ಷಮತೆಯಿದೆ. ಏಳೆಂಟು ಮಂದಿ ಸಹಾಯಕ ಸಿಬ್ಬಂದಿ ತಂಡಕ್ಕೆ ಪೂರಕವಾಗಿ ಶ್ರಮಿಸಿದ್ದಾರೆ. ನಾನು ಇಂತಹ ಸಹಾಯಕ ಸಿಬ್ಬಂದಿಯ ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ವಾಲ್ ಹೇಳಿದ್ದಾರೆ.