ಶ್ರೀಲಂಕಾ ವಿರುದ್ಧ ಗಮನಾರ್ಹ ಪ್ರದರ್ಶನ ತೋರಿದ್ದ ಸ್ಪಿನ್ ತ್ರಿವಳಿಗಳಾದ ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು(ಸೆ.10): ಮುಂದಿನ ವಾರ(ಸೆ.17)ದಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ 3 ಪಂದ್ಯಗಳಿಗೆ 16 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ವೇಗಿಗಳಾದ ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ ತಂಡಕ್ಕೆ ವಾಪಾಸ್ಸಾಗಿದ್ದಾರೆ.
ಲಂಕಾ ಪ್ರವಾಸದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಕನ್ನಡಿಗ ಮನೀಶ್ ಪಾಂಡೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲವಾಗಿದ್ದಾರೆ. ಬಹುತೇಕ ಲಂಕಾ ಪ್ರವಾಸದಲ್ಲಿದ್ದ ತಂಡವನ್ನೇ ಉಳಿಸಿಕೊಂಡಿದ್ದು ಶಾರ್ದೂಲ್ ಠಾಕೂರ್ ಅವರನ್ನು ಕೈಬಿಡಲಾಗಿದೆ.
ಇನ್ನು ಅನುಭವಿ ಸ್ಪಿನ್ನರ್'ಗಳಾದ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾಗೆ ಮತ್ತೊಮ್ಮೆ ವಿಶ್ರಾಂತಿ ನೀಡಲಾಗಿದೆ. ಇದೇ ವೇಳೆ ಹಿರಿಯ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಅವರನ್ನು ಮತ್ತೊಮ್ಮೆ ಕಡೆಗಣಿಸಿರುವುದು ಅವರ ಕ್ರಿಕೆಟ್ ಭವಿಷ್ಯದ ಮೇಲೆ ಮತ್ತೊಮ್ಮೆ ಪ್ರಶ್ನೆ ಮೂಡಲು ಪ್ರಾರಂಭವಾಗಿದೆ.
ಶ್ರೀಲಂಕಾ ವಿರುದ್ಧ ಗಮನಾರ್ಹ ಪ್ರದರ್ಶನ ತೋರಿದ್ದ ಸ್ಪಿನ್ ತ್ರಿವಳಿಗಳಾದ ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 5 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯಾಡಲಿದೆ.
ಟೀಂ ಇಂಡಿಯಾ ಹೀಗಿದೆ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ಕೇದಾರ್ ಜಾಧವ್, ಅಜಿಂಕ್ಯ ರಹಾನೆ, ಎಂ.ಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ.
