ಮುಂಬೈ(ಸೆ.30): ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಹಲವು ಚರ್ಚೆಗೆ ಕಾರಣವಾಗಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಸ್ಥಾನ ನೀಡಿರೋದು ಕನ್ನಡಿಗರ ಸಂತಸವನ್ನ ಇಮ್ಮಡಿಗೊಳಿಸಿದೆ. ಆದರೆ ಮತ್ತೊರ್ವ ಕನ್ನಡಿಗನಿಗೆ ಕೊಕ್ ನೀಡಿರೋದು ಬೇಸರ ತರಿಸಿದೆ.

ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಕೆಎಲ್ ರಾಹುಲ್ ಖಾಯಂ ಸ್ಥಾನ ಪಡೆದಿದ್ದಾರೆ. ರಾಹುಲ್ ಜೊತೆ ಕಳೆದ ಇಂಗ್ಲೆಂಡ್ ಸರಣಿಯಲ್ಲಿ ಕನ್ನಡಿಗ ಕರುಣ್ ನಾಯರ್ ಆಯ್ಕೆಯಾಗಿದ್ದರು. ಆದರೆ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕರುಣ್‌ಗೆ ಅವಕಾಶ ಸಿಕ್ಕಿಲ್ಲ. ಇದೀಗ ವೆಸ್ಟ್ಇಂಡೀಸ್ ಸರಣಿಗೆ ಕರುಣ್‌ಗೆ ಕೊಕ್ ನೀಡಿ, ಮಯಾಂಕ್ ಅಗರ್ವಾಲ್‌ಗೆ ಸ್ಥಾನ ನೀಡಲಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಭಾರತೀಯ ಕ್ರಿಕೆಟಿಗ ಕರುಣ್ ನಾಯರ್‌ಗೆ ಕೊಕ್ ನೀಡಿರೋದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ, ತಂಡಕ್ಕೆ ಆಯ್ಕೆ ಮಾಡಿ ಆಡೋ ಹನ್ನೊಂದರ ಬಳಗದಲ್ಲಿ ಅವಕಾಶ ನೀಡದೇ ಕೊನೆಗೆ ತಂಡದಿಂದಲೇ ಹೊರಬಿದ್ದ ಕರುಣ್ ನಾಯರ್ ಪರ ಟ್ವಿಟರಿಗರು ಬ್ಯಾಟ್ ಬೀಸಿದ್ದಾರೆ.