ಪ್ರವಾಸಿ ತಂಡ ಇಂಗ್ಲೆಂಡ್ ವಿರುದ್ಧದ ಈ ಸರಣಿಯನ್ನು ಗೆಲ್ಲುವ ನೆಚ್ಚಿನ ತಂಡವೆಂಬ ಹಣೆಪಟ್ಟಿ ಹಚ್ಚಿಕೊಂಡಿರುವ ಭಾರತಕ್ಕೆ ಈ ಸರಣಿಯು ನಿಜವಾಗಿಯೂ ಅಗ್ನಿಪರೀಕ್ಷೆಯಾಗಿದೆ. ಕೊಹ್ಲಿ ನಾಯಕತ್ವದಲ್ಲಿ ತವರಿನಲ್ಲಿ ಅಜೇಯ ತಂಡವಾಗಿರುವ ಟೆಸ್ಟ್ ತಂಡಕ್ಕೆ ಈ ಸರಣಿ ಮಾಡು ಇಲ್ಲವೇ ಮಡಿಯೇ ಸರಿ.
ರಾಜ್‌ಕೋಟ್(ನ.08): ಬಹು ನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್ ನಡುವಣದ ಕ್ರಿಕೆಟ್ ಸರಣಿಗೆ ನವೆಂಬರ್ 09 ರಿಂದ ಚಾಲನೆ ಸಿಗುತ್ತಿದ್ದು, ಮೊದಲ ಹಂತದಲ್ಲಿ ನಡೆಯುತ್ತಿರುವ ಐದು ಟೆಸ್ಟ್ ಪಂದ್ಯ ಸರಣಿಯ ಆರಂಭಿಕ ಪಂದ್ಯಕ್ಕೆ ರಾಜ್‌ಕೋಟ್ ಸಾರಥ್ಯ ಹೊತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಮೊದಲ ಬಾರಿಗೆ ಡಿಆರ್‌ಎಸ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದು ಕೂಡ ಈ ಸರಣಿಯ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ.
ಪ್ರವಾಸಿ ತಂಡ ಇಂಗ್ಲೆಂಡ್ ವಿರುದ್ಧದ ಈ ಸರಣಿಯನ್ನು ಗೆಲ್ಲುವ ನೆಚ್ಚಿನ ತಂಡವೆಂಬ ಹಣೆಪಟ್ಟಿ ಹಚ್ಚಿಕೊಂಡಿರುವ ಭಾರತಕ್ಕೆ ಈ ಸರಣಿಯು ನಿಜವಾಗಿಯೂ ಅಗ್ನಿಪರೀಕ್ಷೆಯಾಗಿದೆ. ಕೊಹ್ಲಿ ನಾಯಕತ್ವದಲ್ಲಿ ತವರಿನಲ್ಲಿ ಅಜೇಯ ತಂಡವಾಗಿರುವ ಟೆಸ್ಟ್ ತಂಡಕ್ಕೆ ಈ ಸರಣಿ ಮಾಡು ಇಲ್ಲವೇ ಮಡಿಯೇ ಸರಿ.
ಕಳೆದ ಆರು ವರ್ಷಗಳ ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ಏಳು ಟೆಸ್ಟ್‌ಗಳಲ್ಲಿ ನಾಲ್ಕರಲ್ಲಿ ಸೋಲನುಭವಿಸಿದರೂ, ಮೂರರಲ್ಲಿ ಗೆಲುವು ಸಾಧಿಸಿದೆ. ಜಗತ್ತಿನ ಮಿಕ್ಕ ರಾಷ್ಟ್ರಗಳಿಗೆ ಹೋಲಿಸಿದರೆ ಇಂಗ್ಲೆಂಡ್‌ನ ಈ ಸಾಧನೆಯೇ ದೊಡ್ಡದು.
ಇತ್ತೀಚಿನ ನ್ಯೂಜಿಲೆಂಡ್ ಸರಣಿಯಲ್ಲಿನ ಕ್ಲೀನ್‌ಸ್ವೀಪ್ ಸಾಧನೆ ಭಾರತದ ಬೆನ್ನಿಗಿರುವುದು ಅದರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇತ್ತ ಭಾರತದ ನೆಲದಲ್ಲಿ ಸ್ಮರಣೀಯ ಗೆಲುವು ದಾಖಲಿಸಿರುವ ಇತಿಹಾಸವೂ ಕುಕ್ ಪಡೆಯ ಬೆನ್ನಿಗಿದೆ. ಆದರೆ, ಭಾರತ ಪ್ರವಾಸಕ್ಕೂ ಮುಂಚಿನ ಅದರ ಬಾಂಗ್ಲಾದೇಶ ಪ್ರವಾಸವು ಕುಕ್ ಪಡೆಯನ್ನು ಕೊಂಚ ಕಸಿವಿಸಿಗೊಳಿಸಿದೆ. ಬಡ ಬಾಂಗ್ಲಾ ವಿರುದ್ಧದ ಎರಡು ಟೆಸ್ಟ್ ಸರಣಿಯನ್ನು 1-1ರಿಂದ ಡ್ರಾ ಮಾಡಿಕೊಂಡಿತಾದರೂ, ಕೊನೆಯ ಟೆಸ್ಟ್ ಪಂದ್ಯದಲ್ಲಿ ಅನುಭವಿಸಿದ ಸೋಲು ಅದರ ಆತ್ಮಸ್ಥೈರ್ಯವನ್ನು ಕೆಣಕಿದೆ. ಹೀಗಾಗಿ ಆಂಗ್ಲರಿಗೆ ಈ ಬಾರಿ ಟೀಂ ಇಂಡಿಯಾ ಸುಲಭ ತುತ್ತೇನಲ್ಲ. ಮೇಲಾಗಿ ಸ್ಪಿನ್ ಸ್ನೇಹಿ ತಾಣಗಳಲ್ಲಿ ಭಾರತದ ಸ್ಟಾರ್ ಸ್ಪಿನ್‌ದ್ವಯರಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಬಹುದೊಡ್ಡ ಕಂಟಕವಾಗಿ ಪರಿಣಮಿಸುವ ಸಂಭವವಿದೆ. ಇವರೀರ್ವರ ಜತೆಗೆ ವೇಗಿಗಳ ದಾಳಿಯನ್ನೂ ಸಮರ್ಥವಾಗಿ ಎದುರಿಸಿ ಮತ್ತೊಮ್ಮೆ ಭಾರತ ನೆಲದಲ್ಲಿ ಸರಣಿ ಗೆಲುವು ಸಾಸುವುದು ಕುಕ್ ಪಡೆಗೆ ಭಾರೀ ಸವಾಲಾಗಿ ಪರಿಣಮಿಸಿದೆ.
ಸಂಭವನೀಯರ ಪಟ್ಟಿ
ಭಾರತ
ಗೌತಮ್ ಗಂಭೀರ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಕರುಣ್ ನಾಯರ್ / ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ವೃದ್ಧಿಮಾನ್ ಸಾಹ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಮೊಹಮದ್ ಶಮಿ, ಇಶಾಂತ್ ಶರ್ಮಾ / ಅಮಿತ್ ಮಿಶ್ರಾ / ಉಮೇಶ್ ಯಾದವ್.
ಇಂಗ್ಲೆಂಡ್
ಅಲೆಸ್ಟೈರ್ ಕುಕ್ (ನಾಯಕ), ಹಸೀಬ್ ಹಮೀದ್, ಜೋ ರೂಟ್, ಬೆನ್ ಡಕೆಟ್, ಮೊಯೀನ್ ಅಲಿ, ಬೆನ್ ಸ್ಟೋಕ್ಸ್ / ಮೊಯೀನ್ ಅಲಿ, ಜಾನಿ ಬೇರ್‌ಸ್ಟೋ, ಕ್ರಿಸ್ ವೋಕೆಸ್, ಅದಿಲ್ ರಶೀದ್, ಸ್ಟುವರ್ಟ್ ಬ್ರಾಡ್ ಮತ್ತು ಗರೇತ್ ಬ್ಯಾಟಿ. ಸ್ಟೀವನ್ ಫಿನ್ / ಜೇಕ್ ಬಾಲ್, ಬೆನ್ ಡಕೆಟ್ / ಗ್ಯಾರಿ ಬ್ಯಾಲೆನ್ಸ್.
