ಭಾರತ ಪರ ಕಪಿಲ್ ದೇವ್, ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಗೌತಮ್ ಗಂಭೀರ್ ಅವರಂತಹ ಬ್ಯಾಟ್ಸ್’ಮನ್’ಗಳು ವಿಶ್ವಕಪ್’ನಲ್ಲಿ ಏಕಾಂಗಿಯಾಗಿ ಹೋರಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದು ಇದೆ. ಈ ಎಲ್ಲಾ ಆಟಗಾರರ ಪರಿಶ್ರಮದಿಂದ ಎರಡು ಬಾರಿ[1983 ಮತ್ತು 2011] ಭಾರತ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸಿದೆ.

ಬೆಂಗಳೂರು[ಅ.09]: ಜಾಗತಿಕ ಕ್ರೀಡೆಗಳಲ್ಲಿ ಕ್ರಿಕೆಟ್’ಗೆ ತನ್ನದೇ ಆದ ಸ್ಥಾನವಿದೆ. ಅದರಲ್ಲೂ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ದೇಶವನ್ನು ಪ್ರತಿಯೊಬ್ಬ ಕ್ರಿಕೆಟಿಗನ ಹೆಮ್ಮೆಯ ವಿಷಯ. ಕ್ರಿಕೆಟ್ ದಿಗ್ಗಜರಾದ ಸರ್ ವಿವಿ ರಿಚರ್ಡ್’ಸನ್, ಕಪಿಲ್ ದೇವ್, ವಾಸೀಂ ಅಕ್ರಂ, ಸಚಿನ್ ತೆಂಡುಲ್ಕರ್, ಸನತ್ ಜಯಸೂರ್ಯ, ರಿಕಿ ಪಾಂಟಿಂಗ್, ಕುಮಾರ ಸಂಗಕ್ಕರ, ಎಂ.ಎಸ್ ಧೋನಿಯಂತಹ ಕ್ರಿಕೆಟಿಗರು ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಅದರಲ್ಲೂ ಭಾರತ ಪರ ಕಪಿಲ್ ದೇವ್, ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಗೌತಮ್ ಗಂಭೀರ್ ಅವರಂತಹ ಬ್ಯಾಟ್ಸ್’ಮನ್’ಗಳು ವಿಶ್ವಕಪ್’ನಲ್ಲಿ ಏಕಾಂಗಿಯಾಗಿ ಹೋರಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದು ಇದೆ. ಈ ಎಲ್ಲಾ ಆಟಗಾರರ ಪರಿಶ್ರಮದಿಂದ ಎರಡು ಬಾರಿ[1983 ಮತ್ತು 2011] ಭಾರತ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸಿದೆ.
2019ರ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಪರ ವಿಶ್ವಕಪ್ ’ನಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್’ಮನ್’ಗಳ ಟಾಪ್ 10 ಪಟ್ಟಿ ನಿಮ್ಮ ಮುಂದೆ..

10. ಅಜಯ್ ಜಡೇಜಾ: 522 ರನ್‌

09. ಸುನಿಲ್ ಗವಾಸ್ಕರ್: 561 ರನ್


ಟೀಂ ಇಂಡಿಯಾದ ದಿಗ್ಗಜ ಬ್ಯಾಟ್ಸ್’ಮನ್ ಸುನಿಲ್ ಗವಾಸ್ಕರ್ 1975-87ರ ತನಕ ಒಟ್ಟು 4 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟು 19 ಪಂದ್ಯಗಳಲ್ಲಿ 1 ಶತಕ ಹಾಗೂ 4 ಅರ್ಧಶತಕಗಳ ನೆರವಿನಿಂದ 561 ರನ್ ಬಾರಿಸಿದ್ದರು. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಗವಾಸ್ಕರ್, 1987ರಲ್ಲಿ ಭಾರತ ಪರ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್’ಮನ್ ಎನಿಸಿಕೊಂಡಿದ್ದರು.

08. ವಿರಾಟ್ ಕೊಹ್ಲಿ: 587 ರನ್


ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿ 17 ಪಂದ್ಯಗಳನ್ನು ಆಡಿ 587 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 1 ಅರ್ಧಶತಕ ಸಿಡಿಸಿದ್ದಾರೆ. 2011ರಲ್ಲಿ ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ ಟೂರ್ನಿಗೆ ಪದಾರ್ಪಣೆ ಮಾಡಿದ ಕೊಹ್ಲಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದರು. ಮುಂಬರುವ 2019ರ ವಿಶ್ವಕಪ್’ನಲ್ಲಿ ರನ್ ಮಷೀನ್ ಇನ್ನಷ್ಟು ರನ್’ಗಳನ್ನು ತನ್ನ ಖಾತೆಗೆ ಜಮೆ ಮಾಡಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

07. ಕಪಿಲ್ ದೇವ್: 669 ರನ್


ಟೀಂ ಇಂಡಿಯಾಗೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್. ಒಟ್ಟು 4 ವಿಶ್ವಕಪ್ ಪ್ರತಿನಿಧಿಸಿರುವ ’ಹರ್ಯಾಣದ ಹರಿಕೇನ್’ ಖ್ಯಾತಿಯ ಕಪಿಲ್ 669 ರನ್ ಸಿಡಿಸಿದ್ದಾರೆ. 1983ರ ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ 175 ರನ್ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರೊಂದಿಗೆ ವಿಶ್ವಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎನ್ನುವ ದಾಖಲೆಯನ್ನು ಕಪಿಲ್ ದೇವ್ ನಿರ್ಮಿಸಿದರು. 

06. ಯುವರಾಜ್ ಸಿಂಗ್: 738 ರನ್ 


2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಹಲವಾರು ಬಾರಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. 2003ರಲ್ಲಿ ಚೊಚ್ಚಲ ವಿಶ್ವಕಪ್ ಆಡಿದ್ದ ಯುವಿ ಇದುವರೆಗೆ 23 ಪಂದ್ಯಗಳನ್ನು ಆಡಿ 1 ಶತಕ ಹಾಗೂ 7 ಅರ್ಧಶತಕ ಸೇರಿದಂತೆ ಒಟ್ಟು 738 ರನ್ ಬಾರಿಸಿದ್ದಾರೆ. ಅದರಲ್ಲೂ 2011ರ ವಿಶ್ವಕಪ್’ನಲ್ಲಿ ಒಂದು ಶತಕ ಹಾಗೂ 4 ಅರ್ಧಶತಕ ಸಿಡಿಸಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

05. ಮೊಹಮ್ಮದ್ ಅಜರುದ್ದೀನ್: 826 ರನ್


ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಸ್ಥಿರ ಪ್ರದರ್ಶನ ತೋರಿದ ಆಟಗಾರರಲ್ಲಿ ಮೊಹಮ್ಮದ್ ಅಜರುದ್ದೀನ್ ಕೂಡಾ ಒಬ್ಬರು. 1992, 1996 ಮತ್ತು 1999ರ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡದ ಬೆನ್ನೆಲುಬಾಗಿದ್ದ ಅಜರ್, 30 ಪಂದ್ಯಗಳನ್ನಾಡಿ 826 ರನ್ ಸಿಡಿಸಿದ್ದರು. ಇದರಲ್ಲಿ 8 ಅರ್ಧಶತಕಗಳು ಸೇರಿವೆ.

04. ವಿರೇಂದ್ರ ಸೆಹ್ವಾಗ್: 843 ರನ್


ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ವಿರೇಂದ್ರ ಸೆಹ್ವಾಗ್ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಟಗಾರ. 2011ರ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 175 ರನ್ ಸಿಡಿಸಿ ಮಿಂಚಿದ್ದರು. 2003ರಿಂದ 2011ರ ವರೆಗೆ ವೀರೂ 22 ಪಂದ್ಯಗಳನ್ನಾಡಿ 843 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ ಮೂರು ಅರ್ಧಶತಕಗಳು ಸೇರಿವೆ.

03. ರಾಹುಲ್ ದ್ರಾವಿಡ್: 860 ರನ್


ಟೀಂ ಇಂಡಿಯಾದ ನಂಬಿಕಸ್ಥ ಬ್ಯಾಟ್ಸ್’ಮನ್ ರಾಹುಲ್ ದ್ರಾವಿಡ್ ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅದರಲ್ಲೂ 1999ರ ವಿಶ್ವಕಪ್ ಟೂರ್ನಿಯಲ್ಲಿ 461 ರನ್ ಸಿಡಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಕ್ರಿಕೆಟಿಗ ಎನ್ನುವ ದಾಖಲೆಯನ್ನು ಬರೆದಿದ್ದರು. 2003ರ ವಿಶ್ವಕಪ್ ಟೂರ್ನಿಯಲ್ಲೂ ಮಧ್ಯಮ ಕ್ರಮಾಂಕದಲ್ಲಿ ಭಾರತದ ಬೆನ್ನೆಲುಬು ಎನಿಸಿಕೊಂಡಿದ್ದರು. ಒಟ್ಟಾರೆ ವಿಶ್ವಕಪ್ ಟೂರ್ನಿಯಲ್ಲಿ 22 ಪಂದ್ಯಗಳನ್ನಾಡಿ 860 ಸಿಡಿಸಿದ್ದಾರೆ.

02. ಸೌರವ್ ಗಂಗೂಲಿ: 1006 ರನ್


ಟೀಂ ಇಂಡಿಯಾದ ಯಶಸ್ವಿ ನಾಯಕರಲ್ಲಿ ಸೌರವ್ ಗಂಗೂಲಿ ಕೂಡಾ ಒಬ್ಬರು. ಅದರಲ್ಲೂ 2003ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಫೈನಲ್’ವರೆಗೆ ಕೊಂಡ್ಯೊಯ್ದಿದ್ದ ದಾದಾ, ಆ ಟೂರ್ನಿಯಲ್ಲಿ 465 ರನ್ ಚಚ್ಚಿದ್ದರು. 1999 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಎದುರು ಗಂಗೂಲಿ 183 ರನ್ ಸಿಡಿಸಿ ಮಿಂಚಿದ್ದರು. ವಿಶ್ವಕಪ್ ಟೂರ್ನಿಯಲ್ಲಿ 21 ಪಂದ್ಯಗಳಲ್ಲಿ 4 ಶತಕ ಹಾಗೂ 3 ಅರ್ಧಶತಕಗಳ ನೆರವಿನಿಂದ 1006ರನ್ ಬಾರಿಸಿದ್ದಾರೆ.

01. ಸಚಿನ್ ತೆಂಡುಲ್ಕರ್: 2278 ರನ್


ಆಧುನಿಕ ಕ್ರಿಕೆಟ್’ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡುಲ್ಕರ್ ಒಟ್ಟು 6 ವಿಶ್ವಕಪ್ ಟೂರ್ನಿಯನ್ನು ಪ್ರತಿನಿಧಿಸಿದ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡುಲ್ಕರ್ 45 ಪಂದ್ಯಗಳಲ್ಲಿ 56.95ರ ಸರಾಸರಿಯಲ್ಲಿ 6 ಶತಕ ಹಾಗೂ 15 ಅರ್ಧಶತಕಗಳ ನೆರವಿನಿಂದ ಒಟ್ಟು 2278 ರನ್ ಸಿಡಿಸಿದ್ದಾರೆ. ಈ ಮೂಲಕ ಭಾರತ ಮಾತ್ರವಲ್ಲದೇ ವಿಶ್ವಕಪ್ ಟೂರ್ನಿಗಳಲ್ಲಿ ಗರಿಷ್ಠ ರನ್ ಸಿಡಿಸಿದ ಜಗತ್ತಿನ ಆಟಗಾರರ ಪಟ್ಟಿಯಲ್ಲೂ ಸಚಿನ್ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.