* ದೋಹಾ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ* ಗೆಲುವಿನೊಂದಿಗೆ ಹೊಸ ಅಭಿಯಾನ ಆರಂಭಿಸಿದ ಚಿನ್ನದ ಹುಡುಗ ನೀರಜ್* ಜಾವಲಿನ್ ಥ್ರೋ ಘಟಾನುಗಟಿಗಳನ್ನು ಹಿಂದಿಕ್ಕಿದ ನೀರಜ್ ಚೋಪ್ರಾ

ಕತಾರ್(ಮೇ.06): ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಹೊಸ ಆವೃತ್ತಿಯನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. ದೋಹಾದಲ್ಲಿ ನಡೆದ ಮೊದಲ ಸುತ್ತಿನ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಹಲವು ದಿಗ್ಗಜರನ್ನು ಹಿಂದಿಕ್ಕಿ ವರ್ಲ್ಡ್‌ ಲೀಡಿಂಗ್‌ ತಮ್ಮದಾಗಿಸಿಕೊಂಡರು. ಇದಷ್ಟೇ ಅಲ್ಲದೇ ತಮ್ಮ ವೃತ್ತಿಜೀವನದ ನಾಲ್ಕನೇ ಶ್ರೇಷ್ಠ ಪ್ರದರ್ಶನವನ್ನು ತೋರಿದರು.

ಕತಾರ್‌ನಲ್ಲಿ ನಡೆದ ದೋಹಾ ಡೈಮಂಡ್ ಲೀಗ್ ಟೂರ್ನಿಯಲ್ಲಿ ನೀರಜ್ ಚೋಪ್ರಾ, ಬರೋಬ್ಬರಿ 88.67 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ 25 ವರ್ಷದ ನೀರಜ್ ಚೋಪ್ರಾ, ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆದ ಡೈಮಂಡ್‌ ಲೀಗ್ ಫೈನಲ್‌ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರ​ತೀಯ ಎಂಬ ಹೆಗ್ಗ​ಳಿ​ಕೆಗೆ ಪಾತ್ರ​ರಾ​ಗಿ​ದ್ದರು.

ಇದೀಗ ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ, ಮೊದಲ ಪ್ರಯತ್ನದಲ್ಲಿಯೇ 88.67 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಭರ್ಜರಿ ಆರಂಭವನ್ನೇ ಪಡೆದರು. ಇದು ನೀರಜ್ ಚೋಪ್ರಾ ಅವರ 4ನೇ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿತು. ಟೂರ್ನಿ ಮುಕ್ತಾಯದ ವರೆಗೂ ಯಾವೊಬ್ಬ ಜಾವೆಲಿನ್ ಥ್ರೋ ಪಟುವು ಕೂಡಾ ನೀರಜ್ ಚೋಪ್ರಾ ಅವರ ಪ್ರದರ್ಶನವನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ.

Scroll to load tweet…

ಇನ್ನು ತುಂಬಾ ಕುತೂಹಲಕಾರಿ ಸಂಗತಿಯೆಂದರೆ, 2018ರಲ್ಲಿ ದೋಹಾದಲ್ಲಿಯೇ ನಡೆದಿದ್ದ ಮೊದಲ ಸುತ್ತಿನ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ನೀರಜ್ ಚೋಪ್ರಾ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ನೀರಜ್ ಚೋಪ್ರಾ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

Scroll to load tweet…

ಈ ಬಾರಿಯ ಡೈಮಂಡ್ ಲೀಗ್ ಟೂರ್ನಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ ಬೆಳ್ಳಿ ವಿಜೇತ ಚೆಕ್‌ ಗಣ​ರಾ​ಜ್ಯದ ಜಾಕುಬ್‌ ವೆಡ್ಲ್‌ಜೆಕ್‌, ನೀರಜ್‌ ಚೋಪ್ರಾಗೆ ತುರುಸಿನ ಪೈಪೋಟಿ ನೀಡಿದರು. ಜಾಕುಬ್ ಎರಡನೇ ಪ್ರಯತ್ನದಲ್ಲಿ 88.63 ಮೀಟರ್ ದೂರ ಎಸೆದರಾದರೂ, ನೀರಜ್ ಚೋಪ್ರಾ ಅವರಿಗಿಂತ ಕೇವಲ 4 ಸೆಂಟಿಮೀಟರ್ ಕಡಿಮೆ ದೂರ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಇಂದು ಡೈಮಂಡ್‌ ಲೀಗ್‌: ನೀರಜ್‌ ಚೋಪ್ರಾ ಮೇಲೆ ಎಲ್ಲರ ಚಿತ್ತ

ಚೆಕ್‌ ಗಣ​ರಾ​ಜ್ಯದ ಜಾಕುಬ್‌ ವೆಡ್ಲ್‌ಜೆಕ್‌, ಟೋಕಿಯೋ ಒಲಿಂಪಿಕ್ಸ್‌ನಲ್ಲಿಯೂ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇನ್ನು ಕಳೆದ ವರ್ಷ ನಡೆದ ದೋಹಾ ಡೈಮಂಡ್ ಲೀಗ್ ಟೂರ್ನಿಯಲ್ಲಿ ಜಾಕುಬ್‌ ವೆಡ್ಲ್‌ಜೆಕ್‌, 90.88 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಜಯಿಸಿದ್ದರು.

ಇನ್ನು ಕಳೆದ ಆವೃತ್ತಿಯ ದೋಹಾ ಡೈಮಂಡ್ ಲೀಗ್ ಟೂರ್ನಿಯಲ್ಲಿ ಬರೋಬ್ಬರಿ 93.07 ಮೀಟರ್ ದೂರ ಎಸೆಯುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಗ್ರೆನಾಡದ ಆ್ಯಂಡ​ರ್‌​ಸನ್‌ ಪೀಟರ್ಸ್‌, ಈ ಬಾರಿ ಕೇವಲ 85.88 ಮೀಟರ್ ದೂರ ಜಾವೆಲಿನ್ ಎಸೆಯಲಷ್ಟೇ ಶಕ್ತರಾದರು.

ನೀರಜ್ ಚೋಪ್ರಾ, ತಮ್ಮ ವೃತ್ತಿಜೀವನದಲ್ಲಿ 89.94 ಮೀಟರ್ ದೂರ ಎಸೆದಿರುವುದು ಅವರ ಶ್ರೇಷ್ಠ ಪ್ರದರ್ಶನವಾಗಿದೆ. ಈ ಬಾರಿ 90 ಮೀಟರ್ ದೂರ ನೀರಜ್ ಚೋಪ್ರಾ ಥ್ರೋ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ 90 ಮೀಟರ್ ದೂರ ಎಸೆಯದಿದ್ದರೂ, ಚಾಂಪಿಯನ್ ಪಟ್ಟ ಅಲಂಕರಿಸಲು ನೀರಜ್ ಚೋಪ್ರಾ ಯಶಸ್ವಿಯಾದರು.