ಬೆಂಗಳೂರು(ಫೆ.23): ‘ಮುಂಬರುವ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಶೀಘ್ರದಲ್ಲಿಯೇ ಕೊರೋನಾ ಲಸಿಕೆ ನೀಡುವ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಕೊರೋನಾ ವಾರಿಯರ್ಸ್‌ಗಳಿಗೆ ಲಸಿಕೆ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಭರವಸೆಯ ಕ್ರೀಡಾಪಟುಗಳಿಗೂ ಲಸಿಕೆ ನೀಡಲಾಗುತ್ತದೆ’ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಭರವಸೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಕೊರೋನಾ ವಾರಿಯರ್‌ಗಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ದೇಶಾದ್ಯಂತ ನಡೆಯುತ್ತಿದೆ. ಈ ಅಭಿಯಾನ ಪೂರ್ಣಗೊಂಡ ಬಳಿಕ ಉಳಿದವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದೇ ಹಂತದಲ್ಲಿಯೇ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿರುವ ಹಾಗೂ ಭರವಸೆ ಮೂಡಿಸಿರುವ ಕ್ರೀಡಾಪಟುಗಳಿಗೆ ನೀಡುವ ಬಗ್ಗೆ ಮನವಿ ಮಾಡಿದ್ದೇವೆ. ಕ್ರೀಡಾಪಟುಗಳಿಗೆ ಆದ್ಯತೆ ಮೇಲೆ ಲಸಿಕೆ ನೀಡುವ ಬಗ್ಗೆ ಕೇಳಿಕೊಂಡಿದ್ದೇವೆ. ಆರೋಗ್ಯ ಇಲಾಖೆಯಿಂದ ಈ ಬಗ್ಗೆ ಅಧಿಕೃತವಾಗಿ ಉತ್ತರ ಬಂದಿಲ್ಲ. ಉತ್ತರಕ್ಕೆ ಕಾಯುತ್ತಿರುವುದಾಗಿ ತಿಳಿಸಿದರು.

ಶಿವಮೊಗ್ಗ ದೇಶದ ಕ್ರೀಡಾ ಹಬ್‌ ಆಗಲಿದೆ: ಕಿರಣ್‌ ರಿಜಿಜು ವಿಶ್ವಾಸ

ಟ್ರಯಥ್ಲಾನ್‌ ಓಟ, ಈಜಾಟ: ಇದೇ ವೇಳೆ, ರಿಜಿಜು ಅವರು ‘ಫಿಟ್‌ ಬೆಂಗಳೂರು ಫಾರ್‌ ಫಿಟ್‌ ಇಂಡಿಯಾ’ ಟ್ರಯಥ್ಲಾನ್‌ನಲ್ಲಿ ಪಾಲ್ಗೊಂಡು ಗಮನ ಸೆಳೆದರು. ಸಂಸದ ತೇಜಸ್ವಿ ಸೂರ್ಯ ಅವರು ಕ್ರೀಡಾ ಸಚಿವರಿಗೆ ಸಾಥ್‌ ನೀಡಿದರು.

ಮೂರು ಕಿಲೋ ಮೀಟರ್‌ ನಷ್ಟು ದೂರ ಓಟ, 2 ಕಿಲೋ ಮೀಟರ್‌ ಸೈಕ್ಲಿಂಗ್‌ ಮಾಡಿ ಬಳಿಕ ಬಸವನಗುಡಿ ಈಜು ಕೊಳದಲ್ಲಿ ಈಜು ಧಿರಿಸಿನಲ್ಲೇ ನೀರಿಗಿಳಿದು ಕೆಲಕಾಲ ಈಜಿ ಗಮನ ಸೆಳೆದರು. ‘ಫಿಟ್‌ ಇಂಡಿಯಾ’ದ ಭಾಗವಾಗಿ ನಡೆದ ಟ್ರಯಥ್ಲಾನ್‌ನಲ್ಲಿ ಸಚಿವರು, ಸಂಸದರು ಸೇರಿದಂತೆ ಅನೇಕ ಹಿರಿಯ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಸಾಯ್‌ ಜಿಮ್‌ಗೆ ಶಂಕುಸ್ಥಾಪನೆ

ಟ್ರಯಥ್ಲಾನ್‌ ಬಳಿಕ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಭೇಟಿ ನೀಡಿದ ಕಿರಣ್‌ ರಿಜಿಜು ಅವರು ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣ ಮಾಡಲುದ್ದೇಶಿಸಿದ ಆಧುನಿಕ ಜಿಮ್ನಾಷಿಯಮ್‌ ಕೇಂದ್ರಕ್ಕೆ ಶಂಕು ನೆರವೇರಿಸಿದರು. ಈ ವೇಳೆ ರಾಜ್ಯ ಕ್ರೀಡಾ ಸಚಿವ ನಾರಾಯಣಗೌಡ ಉಪಸ್ಥಿತರಿದ್ದರು. ಹೊಸದಾಗಿ ನಿರ್ಮಾಣವಾಗಲಿರುವ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌, 330 ಹಾಸಿಗೆಗಳನ್ನು ಒಳಗೊಂಡ ಹಾಸ್ಟೆಲ್‌ ಒಳಗೊಂಡಿರಲಿದೆ. ನಂತರ ಮಾತನಾಡಿದ ಅವರು, ಬೆಂಗಳೂರಿನ ಈಜು ಕೊಳ ಸೇರಿದಂತೆ ಸಾಯ್‌ನ ಸೌಲಭ್ಯವನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.