ಬೆಂಗಳೂರು[ಆ.31]: ಜಾವಗಲ್ ಎಕ್ಸ್’ಪ್ರೆಸ್ ಖ್ಯಾತಿಯ ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ 49ನೇ ವಸಂತಕ್ಕೆ ಕಾಲಿರಿಸಿದ್ದಾರೆ.

90ರ ದಶಕದಲ್ಲಿ ಟೀಂ ಇಂಡಿಯಾದ ವೇಗದ ಸಾರಥ್ಯ ವಹಿಸಿದ್ದ ಹೆಮ್ಮೆಯ ಕನ್ನಡಿಗ ಶ್ರೀನಾಥ್, 1991ರಲ್ಲಿ  ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್’ಗೆ ಹಾಗೂ ಪಾಕಿಸ್ತಾನದ ವಿರುದ್ಧ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದರು. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ ಸಾಧನೆ ಮಾಡಿರುವ ಶ್ರೀನಾಥ್, ಏಕದಿನ ಕ್ರಿಕೆಟ್’ನಲ್ಲಿ 315 ಹಾಗೂ ಟೆಸ್ಟ್’ನಲ್ಲಿ 236 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಏಕದಿನ ಕ್ರಿಕೆಟ್’ನಲ್ಲಿ ಅನಿಲ್ ಕುಂಬ್ಳೆ ಬಳಿಕ ಅತಿಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನ್ನುವ ಕೀರ್ತಿಗೆ ಶ್ರೀನಾಥ್ ಪಾತ್ರರಾಗಿದ್ದಾರೆ. ಇದರ ಜತೆಗೆ ಏಕದಿನ ವಿಶ್ವಕಪ್’ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್’ಗಳ ಪೈಕಿ ಜಹೀರ್ ಖಾನ್ ಜತೆ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಜಹೀರ್ ಹಾಗೂ ಶ್ರೀನಾಥ್ ಏಕದಿನ ವಿಶ್ವಕಪ್’ನಲ್ಲಿ ತಲಾ 44 ವಿಕೆಟ್ ಕಬಳಿಸಿದ್ದಾರೆ. ಕರ್ನಾಟಕ ರಣಜಿ ತಂಡ, ಕೌಂಟಿಯಲ್ಲಿ ಲೈಸೆಸ್ಟರ್’ಶೈರ್ ಮತ್ತ ಗ್ಲೌಸ್ಟರ್’ಸ್ಟೈರ್’ಶೇರ್ ತಂಡವನ್ನು ಪ್ರತಿನಿಧಿಸಿದ್ದ ಶ್ರೀನಾಥ್, ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಹೇಳಿದ ಬಳಿಕ ಇದೀಗ ಐಸಿಸಿ ರೆಫ್ರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀನಾಥ್ ಹುಟ್ಟು ಹಬ್ಬಕ್ಕೆ ಐಸಿಸಿ, ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರು ಶುಭಕೋರಿದ್ದಾರೆ.