ನವ​ದೆ​ಹ​ಲಿ(ಅ.05): ಪ್ರತಿಷ್ಠಿತ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಗೆ ಶುಕ್ರವಾರದಿಂದ ಚಾಲನೆ ಸಿಗುತ್ತಿದ್ದು, ರಣಜಿ ಇತಿಹಾಸದಲ್ಲಿ 46 ಬಾರಿ ಚಾಂಪಿಯನ್‌ ಆಗಿ ಮೆರೆದಿರುವ ಮುಂಬೈ ಪ್ರಸಕ್ತ ವರ್ಷದ ರಣಜಿ ಟೂರ್ನಿಯ ಮೊದಲ ದಿನವೇ ತನ್ನ ಅಭಿ​ಯಾನ ಆರಂಭಿ​ಸ​ಲಿದೆ.

ರೋಹ್ಟ​ಕ್‌​ನಲ್ಲಿ ನಡೆ​ಯ​ಲಿ​ರುವ ಮೊದಲ ಪಂದ್ಯ​ದಲ್ಲಿ ಅದು ತಮಿ​ಳು​ನಾಡು ತಂಡ​ವನ್ನು ಎದು​ರಿ​ಸ​ಲಿದೆ. ಇನ್ನು, ಚತ್ತೀಸ್‌ಗಢ ತಂಡಕ್ಕೆ ಇದೇ ಮೊದಲ ಬಾರಿಗೆ ರಣಜಿ ಟೂರ್ನಿ​ಯಲ್ಲಿ ಪಾಲ್ಗೊ​ಳ್ಳುವ ಅವ​ಕಾಶ ಸಿಕ್ಕಿದ್ದು, ಕರ್ನಾ​ಟಕ ತಂಡದ ಅಭಿ​ಯಾನ ಅ. 13ರಿಂದ ಜಾರ್ಖಂಡ್‌ ವಿರು​ದ್ಧದ ಪಂದ್ಯದ ಮೂಲಕ ಆರಂಭ​ವಾ​ಗ​ಲಿದೆ.

ಎರಡು ವಿಶೇ​ಷ: ಈ ಬಾರಿಯ ರಣಜಿ ಟೂರ್ನಿಯಲ್ಲಿ ಎರಡು ಪ್ರಮುಖ ವಿಶೇ​ಷ​ಗ​ಳಿವೆ. ಮೊದಲ ಬಾರಿಗೆ ಟೂರ್ನಿ​ಯನ್ನು ತಟಸ್ಥ ಸ್ಥಳ​ಗ​ಳಲ್ಲಿ ಆಡಿ​ಸಲು ನಿಶ್ಚ​ಯಿ​ಸ​ಲಾ​ಗಿದ್ದು, ಈ ಮೂಲಕ ತವ​ರಿನ ಅಂಗ​ಳ​ದಲ್ಲಿ ತಂಡ​ಗಳು ಆಡು​ತ್ತಿದ್ದ ಸಂಸ್ಕೃ​ತಿಗೆ ತೆರೆ ಬಿದ್ದಿದೆ. ಮತ್ತೊಂದು, ಚತ್ತೀ​ಸ್‌​ಗಢ ಕ್ರಿಕೆಟ್‌ ತಂಡವು ಇದೇ ಮೊದಲ ಬಾರಿ ರಣಜಿ ಪಂದ್ಯಾ​ವ​ಳಿಗೆ ಕಾಲಿ​ಡು​ತ್ತಿದ್ದು ಆ ತಂಡದ ನೇತೃ​ತ್ವ​ವನ್ನು ಹಿರಿಯ ಕ್ರಿಕೆ​ಟಿಗ ಮೊಹ​ಮ್ಮದ್‌ ಕೈಫ್‌ ವಹಿ​ಸಿ​ಕೊಂಡಿ​ದ್ದಾರೆ.

ಚಿ​ಗು​ರಿದ ಕನ​ಸು: 2000ರಲ್ಲಿ ಮಧ್ಯಪ್ರದೇಶ ವಿಭ​ಜ​ನೆ​ಗೊಂಡು ಚತ್ತೀ​ಸ್‌​ಗಢ ಎಂಬ ಹೊಸ ರಾಜ್ಯ ಉದ​ಯ​ವಾ​ದಾಗ ರಚ​ನೆ​ಗೊಂಡಿದ್ದ ಚತ್ತೀ​ಸ್‌​ಗಢ ರಾಜ್ಯ ಕ್ರಿಕೆಟ್‌ ಸಂಘಕ್ಕೆ (ಸಿ​ಎ​ಸ್‌ಸಿಎ​ಸ್‌) ಇತ್ತೀ​ಚಿನವರೆಗೂ ಭಾರ​ತೀಯ ಕ್ರಿಕೆಟ್‌ ಮಂಡಳಿಯ (ಬಿ​ಸಿ​ಸಿ​ಐ​) ಶಾಶ್ವತ ಸದ​ಸ್ಯತ್ವ ಸಿಕ್ಕಿ​ರ​ಲಿಲ್ಲ. ಸುಮಾರು 13 ವರ್ಷ​ಗಳ ನಂತರ, ಇದೇ ವರ್ಷದ ಆರಂಭ​ದಲ್ಲಿ ಮಹ​ತ್ವದ ನಿರ್ಧಾರ ಪ್ರಕ​ಟಿ​ಸಿದ ಬಿಸಿ​ಸಿಐ, ಶಾಶ್ವತ ಸದ​ಸ್ಯತ್ವ ಸಂಸ್ಥೆ​ಗಳ ಪಟ್ಟಿಗೆ 28ನೇ ಸಂಸ್ಥೆಯಾಗಿ ಸೇರ್ಪ​ಡೆ​ಯಾಗಲು ಸಿಎ​ಸ್‌​ಸಿ​ಎಗೆ ಅವ​ಕಾ​ಶ ನೀಡಿತು. ಇದು, ಆ ರಾಜ್ಯದ ಕ್ರಿಕೆಟ್‌ ತಂಡಕ್ಕೆ ರಣಜಿ ಹೆಬ್ಬಾ​ಗಿಲು ತೆರೆ​ದಂತಾ​ಯಿತು. ಹಾಗಾಗಿ, ಇದೇ ಮೊದಲ ಬಾರಿಗೆ ಆ ರಾಜ್ಯ ತಂಡ ರಣ​ಜಿಗೆ ಪದಾ​ರ್ಪಣೆ ಮಾಡ​ಲಿದೆ. ಟೀಂ ಇಂಡಿ​ಯಾ​ದಲ್ಲಿ ಆಡಿದ ಅನು​ಭವ ಹೊಂದಿ​ರುವ ಮೊಹ​ಮ್ಮದ್‌ ಕೈಫ್‌ಗೆ ತಂಡದ ಸಾರಥ್ಯ ನೀಡ​ಲಾ​ಗಿದೆ.

ರಾಜ್ಯ ಸವಾಲು 13ರಿಂದ

ಈವ​ರೆ​ಗಿನ ರಣಜಿ ಇತಿ​ಹಾ​ಸ​ದಲ್ಲಿ 8 ಬಾರಿ ಚಾಂಪಿ​ಯನ್‌ ಆಗಿ​ರುವ ಕರ್ನಾಟಕ, ಪ್ರಸಕ್ತ ರಣಜಿ ಟೂರ್ನಿ​ಯಲ್ಲಿ ಅ. 13ರಿಂದ ತನ್ನ ಅಭಿ​ಯಾನ ಆರಂಭಿ​ಸ​ಲಿದೆ. ನೂತನ ನಿಯ​ಮ​ದಂತೆ, ಈ ಬಾರಿ ರಾಜ್ಯ​ದಲ್ಲಿ ನಡೆ​ಯ​ಲಿ​ರುವ ರಣಜಿ ಪಂದ್ಯ​ಗಳು ಬೆಂಗ​ಳೂರು ಹೊರ​ತಾಗಿ ಮೈಸೂರು, ಹುಬ್ಬ​ಳ್ಳಿ​ಗ​ಳಲ್ಲಿ ನಡೆ​ಯ​ಲಿವೆ. ತಂಡದ ಪ್ರಮುಖ ಆಟ​ಗಾ​ರ​ರಾದ ಕೆ.ಎಲ್‌. ರಾಹುಲ್‌ ಹಾಗೂ ಕರುಣ್‌ ನಾಯರ್‌, ಹಾಲಿ ನ್ಯೂಜಿ​ಲೆಂಡ್‌ ವಿರು​ದ್ಧದ ಟೆಸ್ಟ್‌ ಸರ​ಣಿ​ಗಾಗಿ ಹಿರಿ​ಯರ ತಂಡಕ್ಕೆ ಸೇರ್ಪ​ಡೆ​ಗೊಂಡಿ​ದ್ದಾರೆ. ಹಾಗಾಗಿ, ಅವರ ಅನು​ಪ​ಸ್ಥಿ​ತಿ​ಯು ತಂಡವನ್ನು ಬಾಧಿಸದಂತೆ ಮತ್ತೆ ಯಶಸ್ಸಿನತ್ತ ಮುನ್ನ​ಡೆ​ಸುವ ಜವಾ​ಬ್ದಾರಿಯನ್ನು ವಿನಯ್‌ ಕುಮಾರ್‌ ಸೇರಿದಂತೆ ತಂಡದ ಮಿಕ್ಕವರೂ ಹೊರಬೇಕಿದೆ.