ಭಾರತ ಬ್ಯಾಡ್ಮಿಂಟನ್ ಸೂಪರ್ ಪವರ್ ಆಗಲಿದೆ: ಪ್ರಕಾಶ್ ಪಡುಕೋಣೆ

* ಐತಿಹಾಸಿಕ ಥಾಮಸ್ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ

* 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾಗೆ ಸೋಲುಣಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

* ಭಾರತ ಬ್ಯಾಡ್ಮಿಂಟನ್ ಸೂಪರ್ ಪವರ್ ಆಗಲಿದೆ ಎಂದ ದಿಗ್ಗಜ ಆಟಗಾರ ಪ್ರಕಾಶ್ ಪಡುಕೋಣೆ

Thomas Cup Champion India will now be considered a badminton superpower Says Prakash Padukone kvn

ನವದೆಹಲಿ(ಮೇ.18): ಭಾರತ ಮುಂದೆ ಬ್ಯಾಡ್ಮಿಂಟನ್‌ನಲ್ಲಿ ಸೂಪರ್‌ ಪವರ್‌ ಆಗಿ ಹೊರಹೊಮ್ಮಲಿದೆ. ಥಾಮಸ್‌ ಕಪ್‌ನಲ್ಲಿ (Thomas Cup 2022) ದೇಶದ ಗೆಲುವು ಯಾವುದೇ ವೈಯಕ್ತಿಕ ಸಾಧನೆಗಿಂತ ದೊಡ್ಡದು ಎಂದು ದಿಗ್ಗಜ ಬ್ಯಾಡ್ಮಿಂಟನ್‌ ಆಟಗಾರ, 1980ರಲ್ಲಿ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ ಗೆದ್ದಿರುವ ಪ್ರಕಾಶ್‌ ಪಡುಕೋಣೆ (Prakash Padukone) ಅಭಿಪ್ರಾಯಪಟ್ಟಿದ್ದಾರೆ. ಥಾಮಸ್‌ ಕಪ್‌ನಲ್ಲಿ ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದಿದ್ದ ಭಾರತದ ಯುವ ತಂಡ, ಭಾನುವಾರ ನಡೆದ ಫೈನಲ್‌ನಲ್ಲಿ ದಾಖಲೆಯ 14 ಬಾರಿ ಚಾಂಪಿಯನ್‌ ಇಂಡೋನೇಷ್ಯಾ ವಿರುದ್ಧ 3-0 ಅಂತರದಲ್ಲಿ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟು, ಟ್ರೋಫಿ ಎತ್ತಿಹಿಡಿಯಿತು.

14 ಬಾರಿ ಚಾಂಪಿಯನ್‌ ಇಂಡೋನೇಷ್ಯಾವನ್ನು ಮಣಿಸಿ ಚೊಚ್ಚಲ ಬಾರಿ ಚಾಂಪಿಯನ್‌ ಆದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಇದು ಭಾರತ ಬ್ಯಾಡ್ಮಿಂಟನ್‌ಗೆ ಶ್ರೇಷ್ಠ ಕ್ಷಣ. ಬ್ಯಾಡ್ಮಿಂಟನ್‌ನಲ್ಲಿ ನಮ್ಮ ಶಕ್ತಿ ಪ್ರದರ್ಶಿಸುವ ಸಮಯ ಬಂದಿದೆ. ಇನ್ನು ಹಿಂದಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಮುಂದಿನ 8-10 ವರ್ಷಗಳಲ್ಲಿ ಭಾರತ ಬ್ಯಾಡ್ಮಿಂಟನ್‌ನಲ್ಲಿ ಸೂಪರ್‌ ಪವರ್‌ ಆಗಲಿದೆ. ಈ ಗೆಲುವು ದೇಶದ ಕ್ರೀಡೆಗೆ ದೊಡ್ಡ ಹಿಡಿತ ನೀಡಿದೆ’ ಎಂದಿದ್ದಾರೆ. ‘ದೇಶದ ಮತ್ತಷ್ಟು ಯುವ ಜನತೆ ಬ್ಯಾಡ್ಮಿಂಟನ್‌ನತ್ತ ಬರುತ್ತಿದ್ದಾರೆ. ಕ್ರೀಡೆ ಇನ್ನಷ್ಟು ದೊಡ್ಡದಾಗಿ ಬೆಳೆಯಲಿದೆ. ಸರ್ಕಾರ ಹಾಗೂ ಸಂಸ್ಥೆಗಳ ಬೆಂಬಲದಿಂದ ಬ್ಯಾಡ್ಮಿಂಟನ್‌ ಉತ್ತುಂಗಕ್ಕೆ ಏರಲಿದೆ’ ಎಂದು 1979ರಲ್ಲಿ ಥಾಮಸ್‌ ಕಪ್‌ ಸೆಮಿಫೈನಲ್‌ಗೇರಿದ್ದ ಭಾರತ ತಂಡದಲ್ಲಿದ್ದ ಪಡುಕೋಣೆ ವಿಶ್ವಾಸ ವ್ಯಕ್ತಪಡಿಸಿದರು.

83ರ ಕ್ರಿಕೆಟ್‌ ವಿಶ್ವಕಪ್‌ನಷ್ಟೇ ಮಹತ್ವದ್ದು ಈ ಗೆಲುವು: ಪುಲ್ಲೇಲಾ ಗೋಪಿಚಂದ್‌ 

ಭಾರತ ತಂಡ ಚಿನ್ನ ಗೆಲ್ಲುತ್ತಿದ್ದಂತೆ ‘ಕನ್ನಡಪ್ರಭ’ದ ಸೋದರ ಸಂಸ್ಥೆ ‘ಏಷ್ಯಾನೆಟ್‌ ನ್ಯೂಸ್‌’ನೊಂದಿಗೆ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ(ಬಿಎಐ) ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ಕೋಚ್‌ ಪುಲ್ಲೇಲಾ ಗೋಪಿಚಂದ್‌ ಸಂತಸ ಹಂಚಿಕೊಂಡಿದ್ದರು. 

‘ಇದು ಅತಿದೊಡ್ಡ ಗೆಲುವು ಮತ್ತು ಅವಿಸ್ಮರಣೀಯ ಕ್ಷಣ. ಇದೊಂದು ರೀತಿ 1983ರಲ್ಲಿ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದಂತೆ ಅಥವಾ ಅದಕ್ಕಿಂತ ದೊಡ್ಡದು. ಬ್ಯಾಡ್ಮಿಂಟನ್‌ನಲ್ಲಿ ಇಂಡೋನೇಷ್ಯಾ ದೊಡ್ಡ ಹೆಸರು ಮಾಡಿರುವ ರಾಷ್ಟ್ರ. ಥಾಮಸ್‌ನಲ್ಲಿ ಪರಾಕ್ರಮ ಮೆರೆದಿರುವ ತಂಡದ ವಿರುದ್ಧ ಗೆದ್ದಿರುವುದು ಬ್ಯಾಡ್ಮಿಂಟನ್‌ ಜಗತ್ತಿಗೆ ನಮ್ಮ ಆಗಮನವನ್ನು ತೋರಿಸಿದಂತೆ. ಇಷ್ಟುದಿನ ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಸೈನಾ ಮತ್ತು ಸಿಂಧು ಪ್ರಾಬಲ್ಯ ಸಾಧಿಸುವುದನ್ನು ನೋಡುತ್ತಿದ್ದೆವು. ಈಗ ನಮ್ಮ ಹುಡುಗರೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಇದು ದೇಶದಲ್ಲಿ ಹೆಚ್ಚೆಚ್ಚು ಪೋಷಕರು ತಮ್ಮ ಮಕ್ಕಳನ್ನು ಬ್ಯಾಡ್ಮಿಂಟನ್‌ಗೆ ಸೇರಿಸಲು ಪ್ರೋತ್ಸಾಹಿಸಲಿದೆ. ಈಗಾಗಲೇ ದೇಶದಲ್ಲಿ ಆ ಟ್ರೆಂಡ್‌ ಶುರುವಾಗಿದೆ. ಆಟಗಾರರಿಗೆ ನಿರಂತರ ಪ್ರೋತ್ಸಾಹ, ನೆರವು ನೀಡುತ್ತಿರುವ ಬಿಎಐ ಅಧ್ಯಕ್ಷ ಹಾಗೂ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ಗೋಪಿಚಂದ್‌ ಹೇಳಿದರು.

ತಂಡಕ್ಕೆ ಕರೆ ಮಾಡಿ ಅಭಿನಂದಿಸಿದ ಮೋದಿ!

ಥಾಮಸ್‌ ಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ಪುರುಷರ ತಂಡಕ್ಕೆ ದೂರವಾಣಿ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಆಟಗಾರರನ್ನು ಅಭಿನಂದಿಸಿದರು. ಮುಂದೆ ಇನ್ನಷ್ಟು ಸಾಧನೆ ಮಾಡಲು ಇದು ಪ್ರೇರಣೆಯಾಗಲಿ ಎಂದು ಶುಭ ಕೋರಿದ್ದರು. ಪ್ರಧಾನಿ ಕರೆ ಮಾಡಿ ಹುರಿದುಂಬಿಸಿದ್ದಕ್ಕೆ ಆಟಗಾರರು ಧನ್ಯವಾದ ತಿಳಿಸಿದ್ದಾರೆ. ಇದಕ್ಕೂ ಮುನ್ನ ಟ್ವೀಟ್‌ ಮಾಡಿ ಭಾರತ ತಂಡವನ್ನು ಮೋದಿ ಕೊಂಡಾಡಿದ್ದರು. 

ಬ್ಯಾಡ್ಮಿಂಟನ್ ಗೆ ನೆರವು ನೀಡಿದ ರಾಜೀವ್ ಚಂದ್ರಶೇಖರ್ ಗೆ ಧನ್ಯವಾದ ಹೇಳಿದ ಪ್ರಕಾಶ್‌ ಪಡುಕೋಣೆ

‘ಭಾರತ ತಂಡ ಬ್ಯಾಡ್ಮಿಂಟನ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಅವರ ಸಾಧನೆಗೆ ಇಡೀ ದೇಶವೇ ಸಂಭ್ರಮಿಸುತ್ತಿದೆ. ತಂಡಕ್ಕೆ ಅಭಿನಂದನೆಗಳು ಮತ್ತು ಮುಂದಿನ ಸ್ಪರ್ಧೆಗಳಿಗೆ ಶುಭ ಹಾರೈಕೆಗಳು. ಈ ಗೆಲುವು ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದೆ’ ಎಂದು ಮೋದಿ ಟ್ವೀಟಿಸಿದ್ದರು. ವಿರಾಟ್‌ ಕೊಹ್ಲಿ, ಸಚಿನ್‌ ತೆಂಡುಲ್ಕರ್‌ ಸೇರಿದಂತೆ ಹಾಲಿ, ಮಾಜಿ ಕ್ರೀಡಾಪಟುಗಳು, ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಸೇರಿ ಹಲವು ರಾಜಕೀಯ ನಾಯಕರು ಕೂಡಾ ಭಾರತದ ಸಾಧನೆಯನ್ನು ಶ್ಲಾಘಿಸಿದ್ದಾರೆ.

Latest Videos
Follow Us:
Download App:
  • android
  • ios