ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸಿ, ಮಹತ್ವದ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟಿದ್ದ ಸೌರಾಷ್ಟ್ರದ ಆಲ್ರೌಂಡರ್ ಪ್ರೇರಕ್ ಮಂಕಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಟಿಯಾಲ(ಡಿ.02): ಪಂದ್ಯದ ಕಟ್ಟಕಡೆಯವರೆಗೂ ಸೋಲು ತಪ್ಪಿಸಿಕೊಳ್ಳಲು ಇನ್ನಿಲ್ಲದಂತೆ ಹೋರಾಡಿದ ಕರ್ನಾಟಕ, ಕಡೆಗೂ ಸೌರಾಷ್ಟ್ರ ವಿರುದ್ಧದ ಸವಾಲನ್ನು ಮೆಟ್ಟಿನಿಲ್ಲಲಾಗದೆ 4 ವಿಕೆಟ್ ಸೋಲನುಭವಿಸಿತು. ಇದರಿಂದ ‘ಬಿ’ ಗುಂಪಿನಲ್ಲಿ ಕಾಯ್ದುಕೊಂಡು ಬಂದಿದ್ದ ಅಗ್ರಸ್ಥಾನವನ್ನು ಜಾರ್ಖಂಡ್'ಗೆ ಬಿಟ್ಟುಕೊಟ್ಟಿತು.
ಅತ್ಯಂತ ಕೌತುಕ ಕೆರಳಿಸಿದ್ದ ಪಂದ್ಯದಲ್ಲಿ ಕಡೆಗೂ ಸೌರಾಷ್ಟ್ರ ಆರ್. ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ ತಂಡವನ್ನು ಮಣಿಸುವಲ್ಲಿ ಸಫಲವಾದರೆ, ಕರ್ನಾಟಕ ಈ ಋತುವಿನ ಪಂದ್ಯಾವಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಸೋಲನುಭವಿಸಿತು.
ಇಲ್ಲಿನ ಧ್ರುವ್ ಪಾಂಡೋವ್ ಕ್ರೀಡಾಂಗಣದಲ್ಲಿ ಮುಕ್ತಾಯ ಕಂಡ ಪಂದ್ಯದಲ್ಲಿ ಗೆಲ್ಲಲು 58 ರನ್'ಗಳ ಸಾದಾರಣ ಗುರಿ ಪಡೆದ ಸೌರಾಷ್ಟ್ರ, ಕೆ. ಗೌತಮ್ (14ಕ್ಕೆ 4) ಮತ್ತು ಅಬ್ರಾರ್ ಕಾಜಿ (21ಕ್ಕೆ 2)ಯ ಪ್ರಭಾವಿ ಬೌಲಿಂಗ್ಗೆ ತತ್ತರಿಸಿತಾದರೂ, ಕಡೆಗೆ 18.4 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯದ ನಿಟ್ಟುಸಿರಿಟ್ಟಿತು. ಅಂದಹಾಗೆ ಟೂರ್ನಿಯಲ್ಲಿ ಅದು ದಾಖಲಿಸಿದ ಮೊದಲ ಗೆಲುವಿದೆನ್ನುವುದು ಗಮನಾರ್ಹ. ಮೊದಲ ಇನ್ನಿಂಗ್ಸ್ನಲ್ಲಿ ಅಮೋಘ ಶತಕ ಬಾರಿಸಿ, ಮಹತ್ವದ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟಿದ್ದ ಆಲ್ರೌಂಡರ್ ಪ್ರೇರಕ್ ಮಂಕಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲೀಗ ವಿನಯ್ ಬಳಗ ಮಹಾರಾಷ್ಟ್ರ ವಿರುದ್ಧ ಚೆನ್ನೈನಲ್ಲಿ ಸೆಣಸಲಿದ್ದು, ಈ ಪಂದ್ಯವು ಡಿಸೆಂಬರ್ 7ರಿಂದ ಆರಂಭವಾಗಲಿದೆ. ಸೌರಾಷ್ಟ್ರಕ್ಕೂ ಮುಂಚಿನ ಪಂದ್ಯದಲ್ಲಿ ಒಡಿಶಾ ವಿರುದ್ಧದ ಪಂದ್ಯದಲ್ಲೇ ಸೋಲಿನ ಸುಳಿಗೆ ಸಿಲುಕಿದ್ದ ಕರ್ನಾಟಕ, ಹೇಗೂ ಸೋಲಿನಿಂದ ಬಚಾವಾಗಿತ್ತು. ಆದರೆ, ಸೌರಾಷ್ಟ್ರ ವಿರುದ್ಧ ವಿನಯ್ ಪಡೆಯ ಆಟ ಸಾಗಲಿಲ್ಲ.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್: 200
ಸೌರಾಷ್ಟ್ರ ಮೊದಲ ಇನ್ನಿಂಗ್ಸ್: 359
ಕರ್ನಾಟಕ ದ್ವಿತೀಯ ಇನ್ನಿಂಗ್ಸ್ 216
ಸೌರಾಷ್ಟ ದ್ವಿತೀಯ ಇನ್ನಿಂಗ್ಸ್
18.4 ಓವರ್ಗಳಲ್ಲಿ 6 ವಿಕೆಟ್ಗೆ 58
ಫಲಿತಾಂಶ: ಸೌರಾಷ್ಟ್ರಕ್ಕೆ 4 ವಿಕೆಟ್ ಗೆಲುವು
ಪಾಯಿಂಟ್ಸ್: ಸೌರಾಷ್ಟ್ರ - 6, ಕರ್ನಾಟಕ - 0
