Chess Olympiad ಕ್ರೀಡೆಯಲ್ಲಿ ಸೋಲು ಎನ್ನುವುದಿಲ್ಲ: ಪ್ರಧಾನಿ ಮೋದಿ
ಚೆಸ್ ಒಲಿಂಪಿಯಾಡ್ ಕ್ರೀಡಾಕೂಟಕ್ಕೆ ಪ್ರಧಾನಿ ಮೋದಿ ಚಾಲನೆ
ಚೆನ್ನೈನ ಮಹಾಬಲಿಪುರಂನಲ್ಲಿ ಆರಂಭಗೊಂಡ 44ನೇ ಚೆಸ್ ಒಲಿಂಪಿಯಾಡ್
ಭಾರತ ಚೆಸ್ ಕ್ರೀಡಾಕೂಟದ ತವರು ಎಂದು ಬಣ್ಣಿಸಿದ ಪ್ರಧಾನಿ ಮೋದಿ
ಚೆನ್ನೈ(ಜು.29): ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಚೆಸ್ ಒಲಿಂಪಿಯಾಡ್ ಟೂರ್ನಿಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. 44ನೇ ಆವೃತ್ತಿಯ ಟೂರ್ನಿಗೆ ಮಹಾಬಲಿಪುರಂ ಆತಿಥ್ಯ ವಹಿಸುತ್ತಿದ್ದು, ಉದ್ಘಾಟನಾ ಸಮಾರಂಭವು ಇಲ್ಲಿನ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಿತು. ಟೂರ್ನಿಯನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ‘ಕ್ರೀಡೆಯಲ್ಲಿ ಸೋತವರು ಎನ್ನುವುದಿಲ್ಲ. ಇಲ್ಲಿ ಏನಿದ್ದರೂ ಗೆದ್ದವರು ಮತ್ತು ಭವಿಷ್ಯದಲ್ಲಿ ಗೆಲ್ಲುವವರು ಎನ್ನುವವರಿದ್ದಾರಷ್ಟೇ. ಚೆಸ್ ಒಲಿಂಪಿಯಾಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಆಟಗಾರರು, ತಂಡಗಳಿಗೂ ಶುಭ ಹಾರೈಸುತ್ತೇನೆ’ ಎಂದರು.
‘ಭಾರತೀಯ ಕ್ರೀಡಾ ಸಂಸ್ಕೃತಿಯು ಬಲಿಷ್ಠಗೊಳ್ಳಲು ಯುವಕರು ಶಕ್ತಿ ಮತ್ತು ಪೂರಕವಾದ ವಾತಾವರಣ ಕಾರಣ. ಭಾರತೀಯ ಕ್ರೀಡಾ ಇತಿಹಾಸದಲ್ಲಿ ಇದಕ್ಕಿಂತ ಉತ್ತಮ ಸಮಯ ಹಿಂದೆಂದೂ ಇರಲಿಲ್ಲ. ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಕಿವುಡರ ಒಲಿಂಪಿಕ್ಸ್‌ಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನಗಳು ಮೂಡಿಬಂದಿವೆ. ಈ ಮೊದಲು ನಾವು ಎಲ್ಲಿ ಗೆಲ್ಲಲು ಆಗಿರಲಿಲ್ಲವೋ ಅಂತಹ ಕೂಟಗಳಲ್ಲಿ, ಕ್ರೀಡೆಗಳಲ್ಲಿ ಗೆಲ್ಲಲು ಆರಂಭಿಸಿದ್ದೇವೆ’ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ಉದ್ಘಾಟನಾ ಸಮಾರಂಭದ ವೇಳೆ ಕೆಲ ಸಾಂಸ್ಕೃತಿಕ ಕಾರ‍್ಯಕ್ರಮಗಳು ಎಲ್ಲರ ಮನ ಸೆಳೆದವು. ಭಾರತದ ಯುವ ಚೆಸ್ ಪಟುಗಳಾದ ಪ್ರಜ್ಞಾನಂದ ಮತ್ತು ಗುಕೇಶ್ ಅವರು ಕ್ರೀಡಾ ಜ್ಯೋತಿಯನ್ನು ಹಿಡಿದು ಸಾಗಿದ್ದು ಕಾರ‍್ಯಕ್ರಮದ ಪ್ರಮುಖ ಆಕರ್ಷಣೆ ಎನಿಸಿತು. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ದಿಗ್ಗಜ ಚೆಸ್ ಆಟಗಾರ ವಿಶ್ವನಾಥನ್ ಆನಂದ್, ಖ್ಯಾತ ನಟ ರಜನಿಕಾಂತ್ ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.
187 ರಾಷ್ಟ್ರ ಗಳ ಆಟಗಾರರು ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು, ಶುಕ್ರವಾರದಿಂದ ಸ್ಪರ್ಧೆಗಳು ಆರಂಭಗೊಳ್ಳಲಿವೆ. ಮುಕ್ತ, ಮಹಿಳಾ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.
ಚೆಸ್ ಬೋರ್ಡ್ ಶೈಲಿಯ ಪಂಚೆ, ಶಾಲು ತೊಟ್ಟ ಮೋದಿ!
ಪ್ರಧಾನಿ ಮೋದಿ ಅವರ ಉಡುಗೆ ಎಲ್ಲರ ಗಮನ ಸೆಳೆಯಿತು. ಅವರು ತೊಟ್ಟಿದ್ದ ಪಂಚೆ ಮತ್ತು ಶಾಲುವಿನ ಮೇಲೆ ಚೆಸ್ ಬೋರ್ಡ್ ಮಾದರಿಯಲ್ಲಿ ಬಿಳಿ ಮತ್ತು ಕಪ್ಪು ಚೌಕಗಳು ಇದ್ದವು. ಸಾಮಾಜಿಕ ತಾಣಗಳಲ್ಲಿ ಮೋದಿ ಅವರ ಉಡುಗೆ ಟ್ರೆಂಡ್ ಆಗಿದೆ.
ಇಂದಿನಿಂದ ಚೆಸ್ ಒಲಿಂಪಿಯಾಡ್: ಪ್ರಧಾನಿ ಮೋದಿಯಿಂದ ಉದ್ಘಾಟನೆ
ಕೂಟದಿಂದ ಪಾಕ್ ಹಿಂದಕ್ಕೆ!
ಕೊನೆ ಕ್ಷಣದಲ್ಲಿ ಪಾಕಿಸ್ತಾನ ಒಲಿಂಪಿಯಾಡ್‌ನಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದೆ. ಜು.21ರಂದು ಕಾಶ್ಮೀರ ಮಾರ್ಗವಾಗಿ ಟೂರ್ನಿಯ ಕ್ರೀಡಾ ಜ್ಯೋತಿ ಸಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ತಮ್ಮ ತಂಡಗಳನ್ನು ಹಿಂಪಡೆಯುವುದಾಗಿ ಗುರುವಾರ ಪ್ರಕಟಣೆ ಮೂಲಕ ಪಾಕಿಸ್ತಾನ ತಿಳಿಸಿದೆ. ‘ಭಾರತ ಕ್ರೀಡೆಯ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ’ ಎಂದು ಪಾಕಿಸ್ತಾನದ ವಕ್ತಾರ ಟೀಕಿಸಿದ್ದಾರೆ. ಪಾಕಿಸ್ತಾನದ ನಡೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.