* ಜುಲೈ 28ರಿಂದ 44ನೇ ಚೆಸ್ ಒಲಿಂಪಿಯಾಡ್ ಟೂರ್ನಿಗೆ ಚಾಲನೆ* ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯಲಿರುವ ಕ್ರೀಡಾಕೂಟ* ಪ್ರಧಾನಿ ನರೇಂದ್ರ ಮೋದಿ ಅವರಿಂದ ಕ್ರೀಡಾಕೂಟಕ್ಕೆ ಚಾಲನೆ

ಮಹಾಬಲಿಪುರಂ(ಜು.28): 44ನೇ ಆವೃತ್ತಿಯ ಪ್ರತಿಷ್ಠಿತ ಚೆಸ್‌ ಒಲಿಂಪಿಯಾಡ್‌ ಆತಿಥ್ಯಕ್ಕೆ ತಮಿಳುನಾಡಿನ ಮಹಾಬಲಿಪುರಂನಲ್ಲಿ ವೇದಿಕೆ ಸಜ್ಜಾಗಿದೆ. ಗುರುವಾರದಿಂದ ಆರಂಭಗೊಳ್ಳಲಿರುವ ಟೂರ್ನಿಯು ಆಗಸ್ಟ್‌ 10ರ ವರೆಗೂ ನಡೆಯಲಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಟೂರ್ನಿ ನಡೆಯುತ್ತಿರುವುದು ವಿಶೇಷ. ಬಲಿಷ್ಠ ರಷ್ಯಾ ಹಾಗೂ ಚೀನಾ ಟೂರ್ನಿಗೆ ಗೈರಾಗಿವೆ. ಮುಕ್ತ ಹಾಗೂ ಮಹಿಳಾ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಭಾರತ ಎರಡೂ ವಿಭಾಗಗಳಲ್ಲಿ ತಲಾ 3 ತಂಡಗಳನ್ನು ಕಣಕ್ಕಿಳಿಸಲಿದೆ. ಈ ಬಾರಿ ಮುಕ್ತ ವಿಭಾಗದಲ್ಲಿ 188, ಮಹಿಳಾ ವಿಭಾಗದಲ್ಲಿ 162 ತಂಡಗಳು ಪಾಲ್ಗೊಳ್ಳಲಿದ್ದು, ಇದು ದಾಖಲೆ ಎನಿಸಿದೆ.

ಮುಕ್ತ ವಿಭಾಗದಲ್ಲಿ ಕಣಕ್ಕಿಳಿಯುವ ಭಾರತ ‘ಎ’ ತಂಡದಲ್ಲಿ ವಿದಿತ್‌ ಗುಜರಾತಿ, ಪಿ.ಹರಿಕೃಷ್ಣ, ಅರ್ಜುನ್‌, ಎಸ್‌.ಎಲ್‌.ನಾರಾಯಣನ್‌, ಕೆ.ಶಶಿಕಿರಣ್‌ ಇದ್ದಾರೆ. ಮಹಿಳೆಯರ ‘ಎ’ ವಿಭಾಗದಲ್ಲಿ ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ, ಆರ್‌.ವೈಶಾಲಿ, ತಾನಿಯಾ ಸಚ್‌ದೇವ್‌, ಭಕ್ತಿ ಕುಲ್ಕರ್ಣಿ ಇದ್ದಾರೆ. ಪುರುಷರ ವಿಭಾಗದಲ್ಲಿ ಭಾರತಕ್ಕೆ ಅಮೆರಿಕ, ನಾರ್ವೆ, ಅಜರ್‌ಬೈಜಾನ್‌ನಿಂದ ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ. ಮಹಿಳಾ ವಿಭಾಗದಲ್ಲಿ ಉಕ್ರೇನ್‌, ಜಾರ್ಜಿಯಾ ಮತ್ತು ಕಜಕಸ್ತಾನದಿಂದ ಭಾರತ ತಂಡಕ್ಕೆ ಪ್ರಬಲ ಸ್ಪರ್ಧೆ ಎದುರಾಗಬಹುದು.

ಮೋದಿಯಿಂದ ಉದ್ಘಾಟನೆ

ಚೆಸ್‌ ಒಲಿಂಪಿಯಾಡ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಸ್ವತಃ ಅವರೆÜ ಟ್ವೀಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ‘44ನೇ ಚೆಸ್‌ ಒಲಿಂಪಿಯಾಡ್‌ ಉದ್ಘಾಟನೆಗೆ ಚೆನ್ನೈಗೆ ತೆರಳಲಿದ್ದೇನೆ. ಸಂಜೆ 6ಕ್ಕೆ ಉದ್ಘಾಟನಾ ಕಾರ‍್ಯಕ್ರಮ ನಡೆಯಲಿದೆ. ಇದೊಂದು ವಿಶೇಷ ಟೂರ್ನಿ. ಭಾರತದಲ್ಲಿ ಅದರಲ್ಲೂ ಚೆಸ್‌ ಜೊತೆ ವಿಶೇಷ ನಂಟಿರುವ ತಮಿಳುನಾಡಿನಲ್ಲಿ ನಡೆಯುತ್ತಿರುವುದು ನಮ್ಮ ಹೆಮ್ಮೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಉದ್ದೀಪನ ವಿರೋಧಿ ಮಸೂದೆ ಅಂಗೀಕಾರ

ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಸಂಸ್ಥೆ ಮತ್ತು ರಾಷ್ಟ್ರೀಯ ಡೋಪಿಂಗ್‌ ಪರೀಕ್ಷಾ ಪ್ರಯೋಗಾಲಯದ ಕಾರ್ಯನಿರ್ವಹಣೆಗೆ ಶಾಸನಬದ್ಧ ಚೌಕಟ್ಟನ್ನು ಒದಗಿಸುವ ಮಸೂದೆಯನ್ನು ಲೋಕಸಭೆ ಬುಧವಾರ ಅಂಗೀಕರಿಸಿತು. ರಾಷ್ಟ್ರೀಯ ಉದ್ದೀಪನ ವಿರೋಧಿ ಮಸೂದೆಯು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು ಮತ್ತು ಸರ್ಕಾರವು ಕೆಲವು ಅಧಿಕೃತ ತಿದ್ದುಪಡಿಗಳೊಂದಿಗೆ ಅಂಗೀಕರಿಸಿತು. ಮಸೂದೆಯ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, ಇದು ಕ್ರೀಡೆಯನ್ನು ಉತ್ತೇಜಿಸುತ್ತದೆ ಮತ್ತು ಕ್ರೀಡಾಪಟುಗಳ ಹಿತಾಸಕ್ತಿಯನ್ನು ರಕ್ಷಿಸುತ್ತದೆ ಎಂದರು.

ಅಂಡರ್‌-17 ಕುಸ್ತಿ: ವಿಶ್ವ ಚಾಂಪಿಯನ್‌ ಆದ ಸೂರಜ್‌

ನವದೆಹಲಿ: ಭಾರತದ ಸೂರಜ್‌ ವಸಿಷ್‌್ಠ ಇಲ್ಲಿ ಮಂಗಳವಾರ ನಡೆದ ಅಂಡರ್‌-17 ಗ್ರೀಕೋ ರೋಮನ್‌ ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಈ ಕೂಟದಲ್ಲಿ 32 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಪದಕ ದೊರೆತಿದೆ. 1990ರಲ್ಲಿ ಪಪ್ಪು ಯಾದವ್‌ ಪ್ರಶಸ್ತಿ ಜಯಿಸಿದ್ದರು. ಆ ಬಳಿಕ ಐವರು ಭಾರತೀಯರು ಅಂಡರ್‌-17 ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಿದರೂ ಯಾರೂ ಚಿನ್ನ ಜಯಿಸಿರಲಿಲ್ಲ. 16 ವರ್ಷದ ಸೂರಜ್‌, ಫೈನಲ್‌ನಲ್ಲಿ ಅಜರ್‌ಬೈಜಾನ್‌ನ ಫರ್ಹೈಮ್‌ ಮುಸ್ತಾಫಾಯೆವ್‌ ವಿರುದ್ಧ 11-0 ಅಂತರದಲ್ಲಿ ಜಯಿಸಿದರು.