ಎಎಫ್'ಸಿ ಕಪ್ ಫೈನಲ್ ಹಣಾಹಣಿಯಲ್ಲಿ ಸೋಲು ಕಂಡಿದ್ದರೂ, ಲಕ್ಷಾಂತರ ಭಾರತೀಯರ ಅಭಿಮಾನಿಗಳ ಹೃದಯದಲ್ಲಿ ಬಿಎಫ್'ಸಿ ಕಾಯಂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಬಿಎಫ್'ಸಿ ಇನ್ನೂ ವೈಭವ ಕಾಣಲು ಅದು ಹೆಚ್ಚೆಚ್ಚು ಪಂದ್ಯಗಳನ್ನಾಡಬೇಕಿದೆ.ಆಲ್ಬರ್ಟ್ ರೋಕಾ ಬಿಎಫ್'ಸಿ ಕೋಚ್
ಬೆಂಗಳೂರು(ನ.07): ಕತಾರ್‌ನ ದೋಹಾದಲ್ಲಿ ನ. 5ರಂದು ನಡೆದಿದ್ದ ಎಎಫ್'ಸಿ ಫುಟ್ಬಾಲ್ ಪಂದ್ಯಾವಳಿಯ ಫೈನಲ್‌ನಲ್ಲಿ ಸೋಲನುಭವಿಸಿದರೂ ರನ್ನರ್ ಅಪ್ ಗೌರವಕ್ಕೆ ಭಾಜನವಾಗುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊಟ್ಟಮೊದಲ ಫುಟ್ಬಾಲ್ ಕ್ಲಬ್ ಎಂಬ ಖ್ಯಾತಿ ಗಳಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್'ಸಿ) ತಂಡ, ಇಂದು ಬೆಂಗಳೂರಿಗೆ ಹಿಂದಿರುಗಿತು.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಬಂದಿಳಿದ ತಂಡವನ್ನು ಅಭಿಮಾನಿಗಳು ಆದರದಿಂದ ಬರಮಾಡಿಕೊಂಡರು. ನಾಯಕ ಸುನಿಲ್ ಛೆಟ್ರಿ ಮುಂತಾದ ಸ್ಟಾರ್ ಆಟಗಾರರನ್ನು ಕಂಡು ಪುಳಕಿತರಾದ ಅಭಿಮಾನಿಗಳು ಹತ್ತಿರಕ್ಕೆ ಧಾವಿಸಿ ಕೈಕುಲುಕಿ ತಂಡದ ನೂತನ ಸಾಧನೆಗಾಗಿ ಅಭಿನಂದನೆ ಸಲ್ಲಿಸಿದರು. ಹಲವಾರು ಮಂದಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಆನಂತರ, ಬಿಗಿಭದ್ರತೆಯ ನಡುವೆ ತಂಡದ ಎಲ್ಲಾ ಆಟಗಾರರನ್ನು ಈ ಮೊದಲೇ ನಿಗದಿಯಾಗಿದ್ದವ ವಾಸ್ತವ್ಯದೆಡೆಗೆ ಕೊಂಡೊಯ್ಯಲಾಯಿತು.
ಫೈನಲ್ ಪಂದ್ಯದಲ್ಲಿ ಇರಾಕ್‌ನ ಏರ್ ಫೋರ್ಸ್ ಕ್ಲಬ್ ತಂಡದ ವಿರುದ್ಧ ಸೆಣಸಿದ್ದ ಬಿಎಫ್'ಸಿ 1-0 ಗೋಲಿನ ಅಂತರದಲ್ಲಿ ಪರಾಭವಗೊಂಡಿತ್ತು. ಆದರೂ, ಟೂರ್ನಿಯ ಫೈನಲ್‌ವರೆಗೂ ಪಯಣಿಸಿದ ಸಾಧನೆಯು ಈ ಸೋಲಿನ ನೋವನ್ನು ಮರೆಸಿತ್ತು.
