US Open 2022: ಇಂದಿನಿಂದ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ; 23ನೇ ಪ್ರಶಸ್ತಿ ಮೇಲೆ ರಾಫಾ ಕಣ್ಣು
ಯುಎಸ್ ಓಪನ್ ಟೆನಿಸ್ ಟೂರ್ನಿ ಇಂದಿನಿಂದ ಆರಂಭ
23ನೇ ಗ್ರ್ಯಾನ್ ಸ್ಲಾಂ ಮೇಲೆ ಕಣ್ಣಿಟ್ಟಿರುವ ರಾಫೆಲ್ ನಡಾಲ್
ಯುಎಸ್ ಓಪನ್ ಟೆನಿಸ್ ಟೂರ್ನಿಗೆ ಜೋಕೋ, ಫೆಡರರ್ ಗೈರು
ನ್ಯೂಯಾರ್ಕ್(ಆ.29): 2022ರ ಕೊನೆಯ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ ಯುಎಸ್ ಓಪನ್ ಸೋಮವಾರದಿಂದ ಆರಂಭವಾಗಲಿದ್ದು, ಹಾಲಿ ಚಾಂಪಿಯನ್‌ಗಳಾದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್, ಬ್ರಿಟನ್‌ನ ಎಮ್ಮಾ ರಾಡುಕಾನು, ದಾಖಲೆಯ 22 ಗ್ರ್ಯಾನ್‌ಸ್ಲಾಂಗಳ ಒಡೆಯ ರಾಫೆಲ್ ನಡಾಲ್ ಸೇರಿದಂತೆ ಪ್ರಮುಖರು ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
ಕ್ರಮವಾಗಿ 21 ಹಾಗೂ 20 ಗ್ರ್ಯಾನ್‌ಸ್ಲಾಂಗಳನ್ನು ಗೆದ್ದಿರುವ ಮಾಜಿ ವಿಶ್ವ ನಂ.1 ಟೆನಿಸಿಗ ನೋವಾಕ್ ಜೋಕೋವಿಚ್ ಮತ್ತು ರೋಜರ್ ಫೆಡರರ್ ಈ ಬಾರಿ ಟೂರ್ನಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಈ ವರ್ಷ ಫ್ರೆಂಚ್ ಹಾಗೂ ಆಸ್ಪ್ರೇಲಿಯನ್ ಓಪನ್ ಗೆದ್ದಿರುವ ನಡಾಲ್ ತಮ್ಮ ಗ್ರ್ಯಾನ್‌ಸ್ಲಾಂ ಗಳಿಕೆಯನ್ನು 23ಕ್ಕೇರಿಸುವ ಸಾಧ್ಯತೆ ಹೆಚ್ಚಿದೆ. ಡ್ಯಾನಿಲ್ ಸತತ 2ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಬ್ರಿಟನ್‌ನ ಆ್ಯಂಡಿ ಮರ್ರೆ, ಆಸ್ಪ್ರೇಲಿಯಾದ ನಿಕ್ ಕಿರಿಯೋಸ್, ಗ್ರೀಸ್‌ನ ಸಿಟ್ಸಿಪಾಸ್ ಕೂಡಾ ಪುರುಷರ ಸಿಂಗಲ್ಸ್‌ನಲ್ಲಿ ಪ್ರಮುಖ ಆಟಗಾರರೆನಿಸಿದ್ದಾರೆ.
ಇದೇ ವೇಳೆ 23 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ ಸೆರೆನಾ ವಿಲಿಯಮ್ಸ್‌ಗೆ ಇದು ಕೊನೆಯ ಟೂರ್ನಿ. ಯುಎಸ್ ಓಪನ್ ಬಳಿಕ ಅವರು ವೃತ್ತಿಬದುಕಿನಿಂದ ನಿವೃತ್ತಿ ಪಡೆಯಲಿದ್ದು, ತವರಿನಂಗಳದಲ್ಲಿ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಹಾಗೂ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್, ಸಿಮೋನಾ ಹ್ಯಾಲೆಪ್ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ಆಟಗಾರ್ತಿಯರು ಎನಿಸಿದ್ದಾರೆ.
ಬ್ಯಾಡ್ಮಿಂಟನ್: ವಿಕ್ಟರ್, ಯಮಗುಚಿಗೆ ವಿಶ್ವ ಕಿರೀಟ
ಟೋಕಿಯೋ: ಡೆನ್ಮಾರ್ಕ್ನ ವಿಕ್ಟರ್ ಆಕ್ಸೆಲ್ಸನ್ ಮತ್ತು ಜಪಾನ್‌ನ ಅಕನೆ ಯಮಗುಚಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಕ್ಟರ್, ಥಾಯ್ಲೆಂಡ್‌ನ ಕುನ್ಲಾವುಟ್ ವಿಟಿಡ್ಸರ್ನ್ ವಿರುದ್ಧ 21-5, 21-16 ಗೇಮ್‌ಗಳಲ್ಲಿ ಸುಲಭವಾಗಿ ಗೆದ್ದರು.
ಬ್ಯಾಡ್ಮಿಂಟನ್ ವಿಶ್ವ ಕೂಟ: ಸಾತ್ವಿಕ್-ಚಿರಾಗ್‌ಗೆ ಐತಿಹಾಸಿಕ ಕಂಚು
ಹಾಲಿ ಒಲಿಂಪಿಕ್ ಚಾಂಪಿಯನ್ ಸಹ ಆಗಿರುವ ವಿಕ್ಟರ್, 2017ರಲ್ಲಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್ ಚಿನ್ನ ಗೆದ್ದಿದ್ದರು. ಇನ್ನು ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಯಮಗುಚಿ ಹಾಲಿ ಒಲಿಂಪಿಕ್ ಚಾಂಪಿಯನ್ ಚೀನಾದ ಚೆನ್ ಯೂಫಿ ವಿರುದ್ಧ 21-12, 10-21, 21-14ರಲ್ಲಿ ಗೆದ್ದು ಸತತ 2ನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟಅಲಂಕರಿಸಿದರು.
ಬಾಸ್ಕೆಟ್‌ಬಾಲ್: ಭಾರತ, ಲೆಬನಾನ್ ಪಂದ್ಯ ಇಂದು
ಬೆಂಗಳೂರು: 2023ರ ಬಾಸ್ಕೆಟ್‌ಬಾಲ್ ವಿಶ್ವಕಪ್ ಏಷ್ಯನ್ ಅರ್ಹತಾ ಸುತ್ತಿನ ‘ಇ’ ಗುಂಪಿನ ಭಾರತ ಹಾಗೂ ಲೆಬನಾನ್ ನಡುವಿನ ಪಂದ್ಯವು ಸೋಮವಾರ ಬೆಂಗಳೂರಿನಲ್ಲಿ ನಡೆಯಲಿದೆ. ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣವು ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ಅರ್ಹತಾ ಟೂರ್ನಿಯ ಮೊದಲ ಸುತ್ತಿನಲ್ಲಿ ‘ಎ’ ಗುಂಪಿನಲ್ಲಿದ್ದ ಭಾರತ, ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋತರೂ 3ನೇ ಸ್ಥಾನ ಪಡೆದು 2ನೇ ಸುತ್ತಿಗೆ ಪ್ರವೇಶ ಪಡೆದಿತ್ತು. 2ನೇ ಸುತ್ತಿನಲ್ಲಿ ‘ಇ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಆ.25ರಂದು ಅಮ್ಮಾನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಜೊರ್ಡನ್ ವಿರುದ್ಧ 64-80ರಲ್ಲಿ ಸೋಲು ಕಂಡಿತ್ತು. ಸದ್ಯ ಆಡಿರುವ 5 ಪಂದ್ಯಗಳಲ್ಲೂ ಸೋತು ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿರುವ ಭಾರತಕ್ಕಿದು ಮಹತ್ವದ ಪಂದ್ಯ ಎನಿಸಿದೆ. ಗುಂಪಿನಲ್ಲಿ ಅಗ್ರ 3 ಸ್ಥಾನಗಳನ್ನು ಪಡೆಯುವ ತಂಡಗಳು ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.