Asianet Suvarna News Asianet Suvarna News

ಬ್ಯಾಡ್ಮಿಂಟನ್‌ ವಿಶ್ವ ಕೂಟ: ಸಾತ್ವಿಕ್‌-ಚಿರಾಗ್‌ಗೆ ಐತಿಹಾಸಿಕ ಕಂಚು

ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಪದಕ ಗೆದ್ದ ಭಾರತ ಡಬಲ್ಸ್‌ ಬ್ಯಾಡ್ಮಿಂಟನ್ ತಂಡ
ಚಿರಾಗ್‌ ಶೆಟ್ಟಿ-ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿಗೆ ಒಲಿದ ಕಂಚಿನ ಪದಕ
ಭಾರತಕ್ಕೆ ಪುರುಷರ ಡಬಲ್ಸ್‌ನಲ್ಲಿ ಚೊಚ್ಚಲ ಪದಕ

BWF World Championship 2022 India Chirag Shetty Satwik Rankireddy clinch historic bronze in Tokyo kvn
Author
First Published Aug 28, 2022, 9:50 AM IST

ಟೋಕಿಯೋ(ಆ.28): ಟೋಕಿಯೋದಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಐತಿಹಾಸಿಕ ಕಂಚಿನ ಪದಕದ ಸಾಧನೆ ಮಾಡಿದೆ. ಇವರಿಬ್ಬರು ಕೂಟದ ಇತಿಹಾಸದಲ್ಲೇ ಭಾರತಕ್ಕೆ ಪುರುಷರ ಡಬಲ್ಸ್‌ನಲ್ಲಿ ಚೊಚ್ಚಲ ಪದಕ ತಂದುಕೊಟ್ಟರು.

ಶನಿವಾರ 77 ನಿಮಿಷಗಳ ಕಾಲ ನಡೆದ ಸೆಮಿಫೈನಲ್‌ನಲ್ಲಿ ವಿಶ್ವ ನಂ.7 ಭಾರತದ ಜೋಡಿ ಮಲೇಷ್ಯಾದ ಆ್ಯರೋನ್‌ ಚಿಯಾ-ಸೊಹ್‌ ವೂ ಯಿಕ್‌ ವಿರುದ್ಧ 22-​20, 18-​21, 16​-21 ಗೇಮ್‌ಗಳಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟುಕೊಂಡಿತು. ಇದು ವಿಶ್ವ ನಂ.6, ಮಲೇಷ್ಯಾ ಜೋಡಿ ವಿರುದ್ಧ ಸಾತ್ವಿಕ್‌-ಚಿರಾಗ್‌ಗೆ ಸತತ 6ನೇ ಸೋಲು. ಇದರೊಂದಿಗೆ ಕೂಟದಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು.

ಭಾರತ ಈ ಬಾರಿ ಕೇವಲ ಒಂದು ಪದಕದೊಂದಿಗೆ ತವರಿಗೆ ಹಿಂದಿರುಗಿತು. ಕಳೆದ ವರ್ಷ ಸಿಂಗಲ್ಸ್‌ನಲ್ಲಿ 2 ಪದಕ ಗೆದ್ದಿದ್ದರೂ ಈ ಬಾರಿ ಯಾವುದೇ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಕೂಟದ ಇತಿಹಾಸದಲ್ಲಿ ಭಾರತ ಒಂದು ಚಿನ್ನ(ಪಿ.ವಿ.ಸಿಂಧು-2019) ಸೇರಿ ಒಟ್ಟು 13 ಪದಕಗಳನ್ನು ಜಯಿಸಿದೆ.

ಫುಟ್ಬಾಲ್‌ ಅಭಿಮಾನಿಗಳ ಜಯ: ಸಚಿವ ಅನುರಾಗ್‌

ನವದೆಹಲಿ: ಜಾಗತಿಕ ಫುಟ್ಬಾಲ್‌ ಆಡಳಿತ ಸಮಿತಿ(ಫಿಫಾ) ಭಾರತೀಯ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ಮೇಲಿನ ಅಮಾನತು ಹಿಂಪಡೆದಿದ್ದು ಫುಟ್ಬಾಲ್‌ ಅಭಿಮಾನಿಗಳ ಗೆಲುವು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಬಣ್ಣಿಸಿದ್ದಾರೆ. ಇತ್ತೀಚೆಗಷ್ಟೇ ಫಿಫಾ ಹೊರಗಿನ ವ್ಯಕ್ತಿಗಳ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಎಐಎಫ್‌ಎಫ್‌ ಅನ್ನು ಅಮಾನತು ಮಾಡಿತ್ತು. ಅದನ್ನು ಶುಕ್ರವಾರ ಹಿಂಪಡೆದಿದೆ. 

ಡೈಮಂಡ್‌ ಲೀಗ್ ಟೂರ್ನಿಯಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಗಣ್ಯರಿಂದ ಅಭಿನಂದನೆಗಳ ಸುರಿಮಳೆ

‘ಫಿಫಾ ಅಮಾನತು ತೆರವು ಸುದ್ದಿಯನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ನಾವು ನಿರೀಕ್ಷಿಸಿದಂತೆಯೇ ಫಿಫಾ ಅಂಡರ್‌-17 ವಿಶ್ವಕಪ್‌ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಿಗದಿಯಂತೆ ನಡೆಯಲಿದೆ. ಇದು ಫುಟ್ಬಾಲ್‌ ಅಭಿಮಾನಿಗಳ ಗೆಲುವು’ ಎಂದು ಠಾಕೂರ್‌ ಟ್ವೀಟ್‌ ಮಾಡಿದ್ದಾರೆ.

ಡೋಪಿಂಗ್‌: ನವ್ಜೀತ್‌ ತಾತ್ಕಾಲಿಕ ಅಮಾನತು

ನವದೆಹಲಿ: ಭಾರತದ ನಂ.1 ಡಿಸ್ಕಸ್‌ ಥ್ರೋ ಪಟು ನವ್ಜೀತ್‌ ಕೌರ್‌ ಡೋಪಿಂಗ್‌ ಸುಳಿಯಲ್ಲಿ ಸಿಲುಕಿದ್ದು, ನಿಷೇಧಿತ ಪದಾರ್ಥ ಸೇವಿಸಿದ ಹಿನ್ನಲೆಯಲ್ಲಿ ಅವರನ್ನು ತಾತ್ಕಾಲಿಕ ಅಮಾನತು ಮಾಡಲಾಗಿದೆ ಎಂದು ಅಥ್ಲೆಟಿಕ್ಸ್‌ ಇಂಟೆಗ್ರಿಟಿ ಯುನಿಟ್‌(ಎಐಯು) ಶನಿವಾರ ತಿಳಿಸಿದೆ. 

2018ರಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಪಂಜಾಬ್‌ ಮೂಲದ ಕೌರ್‌ ಅವರ ಮೂತ್ರದ ಮಾದರಿಯನ್ನು ಇತ್ತೀಚೆಗಷ್ಟೇ ಕಜಕಸ್ತಾನದ ಅಲ್ಮಾಟಿ ಎಂಬಲ್ಲಿ ಸಂಗ್ರಹಿಸಿತ್ತು. ವರದಿಯಲ್ಲಿ ನಿಷೇಧಿತ ಪದಾರ್ಥ ಸೇವಿಸಿದ್ದು ಕಂಡುಬಂದ ಹಿನ್ನೆಯಲ್ಲಿ ಅವರು ತಾತ್ಕಾಲಿಕ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಕಳೆದ ನವೆಂಬರ್‌ನಿಂದ ಭಾರತದ 9 ಅಥ್ಲೀಟ್‌ಗಳು ಡೋಪಿಂಗ್‌ ಪರೀಕ್ಷೆಯಲ್ಲಿ ವಿಫಲರಾಗಿ ನಿಷೇಧಕ್ಕೊಳಗಾಗಿದ್ದಾರೆ.

Follow Us:
Download App:
  • android
  • ios