ನವದೆಹಲಿ(ಮೇ.23): ಬಿಜೆಪಿ ಒಕ್ಕೂಟದ NDA ಸತತ 2ನೇ ಬಾರಿಗೆ ಅಧಿಕಾರಕ್ಕೇರಲು ಸಜ್ಜಾಗಿ ನಿಂತಿದೆ. ನರೇಂದ್ರ ಮೋದಿ 2ನೇ ಬಾರಿಗೆ ಪೂರ್ಣ ಬಹುಮತದ ಸರ್ಕಾರ ರಚಿಸಲಿದ್ದಾರೆ. ಬಿಜೆಪಿ ಸೋಲಿಸಲು ಮಹಾಘಟಬಂದನ್, ಮೈತ್ರಿ ಸೇರಿದಂತೆ ಹಲವು ಕಸರತ್ತು ನಡೆಸಿದ ಕಾಂಗ್ರೆಸ್ ಸೇರಿದಂತೆ ಎದುರಾಳಿಗಳಿಗೆ ಯಾವೂದೂ ವರ್ಕೌಟ್ ಆಗಿಲ್ಲ. ಇದೀಗ ಕಾಂಗ್ರೆಸ್ ಪಾಳೆಯದಲ್ಲಿ ಸೋಲಿನ ಪರಾಮರ್ಶೆ ನಡೆಯುತ್ತಿದ್ದರೆ, ಬಿಜೆಪಿ ಸಂಭ್ರಮಾಚರಣೆಯಲ್ಲಿ ತೊಡಗಿದೆ.

2019ರ ಚುನಾವಣೆ ಬಿಜೆಪಿಗೆ ಅತೀ ದೊಡ್ಡ ಸವಾಲಾಗಿತ್ತು. ನೋಟು ಅಪನದೀಕರಣ, ಜಿಎಸ್‌ಟಿ, ರಾಫೆಲ್ ಡೀಲ್, ಹಿಂದುತ್ವ, ಪುಲ್ವಾಮಾ ದಾಳಿ, ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಹಲವು ವಿಚಾರಗಳು ವಿರೋಧ ಪಕ್ಷಗಳು ಬಹುದೊಡ್ಡ ಅಸ್ತ್ರವಾಗಿ ಪ್ರಯೋಗಿಸಿತ್ತು. ಆದರೆ ಮತದಾರರ ಮಾತ್ರ ಮೋದಿ ಮತ್ತೊಮ್ಮೆ ಕೂಗಿಗೆ ಒಗೊಟ್ಟಿದ್ದಾರೆ. ಈ ಭಾರಿ ಬಿಜೆಪಿ ಭರ್ಜರಿ ಗೆಲುವಿಗೆ 10 ಕಾರಣಗಳಿವೆ.

ಅಧ್ಯಕ್ಷ ರೀತಿಯ ಚುನಾವಣಾ ಸ್ಪರ್ಧೆ
2014 ಹಾಗೂ 2019ರ ಚುನಾವಣೆಗಳಲ್ಲಿ ಬಿಜೆಪಿಗಿಂತ ಮೋದಿ ಕೇಂದ್ರ ಬಿಂದುವಾಗಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಅಮೇರಿಕಾ ಅಧ್ಯಕ್ಷ ರೀತಿಯ ತಂತ್ರಗಾರಿಗೆ ಉಪಯೋಗಿಸಿದ್ದರು. ನರೇಂದ್ರ ಮೋದಿಯನ್ನೇ ಕೇಂದ್ರ ಬಿಂದುವಾಗಿ ಮಾಡಿ ಚುನಾವಣೆ ಎದುರಿಸಿ ಯಶಸ್ವಿಯಾಗಿದೆ. ಆದರೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಪ್ರಧಾನಿ ಅಭ್ಯರ್ಥಿಯನ್ನು ಹೆಸರಿಸದೇ ಚುನಾವಣೆ ಎದುರಿಸಿತು. ಮೋದಿ ವಿರುದ್ದ ಸಮರ್ಥ ನಾಯಕರ ಕೊರತೆ ಎದ್ದುಕಾಣುತ್ತಿತ್ತು.

ಹಳ್ಳ ಹಿಡಿಯಿತು ಜಾತಿ ಸಮ್ಮಿಶ್ರ ರಾಜಕಾರಣ
ಮೋದಿ ಸೋಲಿಸಲು ಬಿಜೆಪಿ ಬದ್ಧವೈರಿಗಳೆಲ್ಲಾ ಕೈಜೋಡಿಸಿತ್ತು. ಸುದೀರ್ಘ ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ SP(ಸಮಾವಾದಿ ಪಾರ್ಟಿ) ಹಾಗೂ BSP(ಬಹುಜನ ಸಮಾಜವಾದಿ ಪಾರ್ಟಿ) ಒಂದಾಗಿ ಚುನಾವಣೆ ಎದುರಿಸಿತು. ಈ ಮೂಲಕ ಯಾದವ ಜನಾಂಗ, ಪರಿಶಿಷ್ಠ ಜಾತಿ ಹಾಗೂ ಮುಸ್ಲಿಂ ಮತಗಳನ್ನು ಸೆಳೆಯೋ SP ಹಾಗೂ BSP ಪ್ಲಾನ್ ಉಲ್ಟಾ ಹೊಡೆಯಿತು. ಆದರೆ ಮೋದಿ ಜನಪ್ರಿಯತೆ ಹಾಗೂ ಬಿಜೆಪಿ  ಆಡಳಿತದ ಸಾಧನೆ  ಮುಂದೆ ಅತೀ ದೊಡ್ಡ  ರಣತಂತ್ರ ಫಲ ನೀಡಲಿಲ್ಲ.

ದುರ್ಬಲವಾಗಿದೆ ಬಿಜೆಪಿ ಪ್ರತಿಸ್ಪರ್ಧಿ ಕಾಂಗ್ರೆಸ್ 
ಮೋದಿ ಹಾಗೂ ಬಿಜೆಪಿ ಅಬ್ಬರದ ಮುಂದೆ ಕಾಂಗ್ರೆಸ್ ಬಡವಾಗಿದೆ. ಹಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದರೆ, ಕಾಂಗ್ರೆಸ್ ಖಾತೆ ಕೂಡ ತೆರೆದಿಲ್ಲ. ಗುಜರಾತ್, ಮಧ್ಯಪ್ರದೇಶ,ರಾಜಸ್ಥಾನ, ಹಿಮಾಚಲ ಪ್ರದೇಶ, ಚತ್ತೀಸ್‌ಘಡ ಹಾಗೂ ಉತ್ತರಖಂಡದಲ್ಲಿನ 97 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದಿದ್ದು ಕೇವಲ 3 ಮಾತ್ರ. ಹೀಗಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ತಂತ್ರಗಾರಿಕೆ ಬದಲಿಸಬೇಕಿದೆ.

ಕಾಂಗ್ರೆಸ್ ಕುಟುಂಬ ರಾಜಕಾರಣ ಬಿಜೆಪಿಗೆ ವರ
ಕುಟುಂಬ ರಾಜಕಾರಣ ಇಂದು ನಿನ್ನೆಯದಲ್ಲ. ಗಾಂಧಿ ಕುಟುಂಬ ರಾಜಕಾರಣ ಕೂಡ ಬಿಜೆಪಿ ಗೆಲುವುಗೆ ಸಹಕಾರಿಯಾಗಿದೆ. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬಳಿಕ ರಾಹುಲ್‌ ಗಾಂಧಿಯನ್ನು ಪ್ರಧಾನಿ ಮಾಡಲು ಹೋದ ಕಾಂಗ್ರೆಸ್ ಬಡವಾಯಿತು. ಪಕ್ಷದಲ್ಲಿ ಮೋದಿಯಷ್ಟೇ ವರ್ಚಸ್ಸಿರೋ ನಾಯಕರಿದ್ದರೂ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿ ತಮ್ಮ ಸೋಲಿಗೆ ತಾವೇ ಕಾರಣರಾದರು. 

ವಿಧಾನಸಭಾ-ಲೋಕಸಭಾ ಚುನಾವಣೆ ವ್ಯತ್ಯಾಸ
ರಾಜಸ್ಥಾನ ಹಾಗೂ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್, ಲೋಕಸಭೆಯಲ್ಲೂ ಬಿಜೆಪಿ ಸೋಲಿಸೋ ಆತ್ಮವಿಶ್ವಾಸದಲ್ಲಿತ್ತು. ಕಾಂಗ್ರೆಸ್ ಲೆಕ್ಕಾಚಾರಕ್ಕೆ ಮತದಾರ ಪ್ರಭು ಸ್ಪಂದಿಸಲೇ ಇಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭಿವೃದ್ದಿ ವಿಚಾರವನ್ನು ಮುಂದಿಟ್ಟು ಚುನಾವಣೆ ಎದುರಿಸಿತು. ಆದರೆ ಲೋಕಸಭಾ ಚುನಾವಣೆ ವಸ್ತು ಮೋದಿ ಹಾಗೂ ಮೋದಿ ವಿರುದ್ಧವಾಗಿತ್ತು. ಇದು ಲೋಕಸಭೆಯಲ್ಲಿ ಕೈಹಿಡಿಯಲಿಲ್ಲ. ಜನಪ್ರಿಯ ನಾಯಕನ ವಿರುದ್ಧದ ಹೇಳಿಕೆಗೆಳೆಲ್ಲಾ ಕಾಂಗ್ರೆಸ್‌ಗೆ ಮುಳುವಾದರೆ, ಬಿಜೆಪಿಗೆ ಗೆಲುವಿಗೆ ನೆರವಾಯಿತು.

ಚುನಾವಣೆಯಲ್ಲಿ ಮೊಳಗಿತು ದೇಶದ ಭದ್ರತೆ
ಚುನಾವಣೆಗೂ ಮೊದಲು ನಡೆದ ಭಯೋತ್ಪದನಾ ದಾಳಿ ಹಾಗೂ ಮೋದಿ ನೇತೃತ್ವದ ಬಿಜೆಪಿ ತೆಗೆದುಕೊಂಡ ನಿರ್ಧಾರಗಳು ಭಾರಿ ಚರ್ಚೆಯಾಗಿತ್ತು. ಸರ್ಜಿಕಲ್ ಸ್ಟ್ರೈಕ್,  ಪುಲ್ವಾಮಾ ದಾಳಿಗೆ ಪ್ರತಿಯಾಗಿ ಬಾಲಾಕೋಟ್ ಏರ್‌ಸ್ಟ್ರೈಕ್ ಮೋದಿ ಸರ್ಕಾರ ದಿಟ್ಟ ನಿರ್ಧಾರವಾಗಿತ್ತು. ಇದು ಭಯೋತ್ಪಾದನೆ ವಿರುದ್ಧ ಭಾರತ ತೆಗೆದುಕೊಂ ಮೊತ್ತಮೊದಲ ಆಕ್ರಮಣಕಾರಿ ನಿರ್ಧರವಾಗಿತ್ತು. ಈ ವಿಚಾರವನ್ನು ಮುಂದಿಟ್ಟುಕೊಂಡ ಕಾಂಗ್ರೆಸ್ ಮೋದಿ ಸರ್ಕಾರ ಹಾಗೂ ಭಾರತೀಯ ಸೇನೆಯನ್ನು ಅವಮಾನಿಸಿತು. ಚುನಾವಣೆಯಲ್ಲಿ ಇದರ ಫಲಿತಾಂಶ ಸ್ಪಷ್ಟವಾಗಿ ಗೋಚರಿಸಿತು.

ಬಿಜೆಪಿ ಪ್ಲಾನಿಂಗ್ ಎಲ್ಲರಿಗಂತಲೂ ಭಿನ್ನ
2014ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ, ಈ ಬಾರಿ ಪಶ್ಚಿಮ ಬಂಗಾಳ ಹಾಗೂ ಒಡಿಶ್ಸಾದಲ್ಲಿ ಬಿಜೆಪಿ ಅದ್ಬುತ ಸಾಧನೆ ಮಾಡಿದೆ. ಬಂಗಾಳದಲ್ಲಿನ ಸಮಸ್ಯೆ ಹಾಗೂ ಮಮತಾ ಬ್ಯಾನರ್ಜಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿದ ಬಿಜೆಪಿ ಚುನಾವಣೆಗೆ ಧುಮುಕಿತ್ತು. ಇನ್ನು ಒಡಿಶಾದಲ್ಲೂ ಬಿಜೆಪಿ ಉತ್ತಮ ಪ್ರದರ್ಶನ ನೀಡಿದೆ. ಇದು ಬಿಜೆಪಿ ರಣತಂತ್ರ ಭಾಗವಾಗಿದೆ. ಇತರ ಪಕ್ಷಗಳಿಗಿಂತ ಬಲಿಷ್ಠ ಸಂಘಟನೆಯೊಂದಿಗೆ ಮುನ್ನಗ್ಗುತ್ತಿರುವ ಬಿಜೆಪಿ, ರಾಜ್ಯಕ್ಕೆ ತಕ್ಕ ಪ್ಲಾನಿಂಗ್ ರೂಪಿಸುತ್ತಿದೆ.

ಜಿಗಿತ ಕಂಡ ಷೇರು ಮಾರುಕಟ್ಟೆ
ಉದ್ಯಮಿಗಳು, ಬಂಡವಾಳ ಹೂಡಿಕೆದಾರರು ಮೋದಿಮತ್ತೊಮ್ಮೆ ಸರ್ಕಾರ ರಚಿಸುವುದಕ್ಕೆ ಫುಲ್ ಮಾರ್ಕ್ಸ್ ನೀಡಿದ್ದರು. ಎಕ್ಸಿಟ್ ಪೋಲ್ ಸಮೀಕ್ಷೆ ಹೊರಬೀಳುತ್ತಿದ್ದಂತೆ ಷೇರುಪೇಟೆ ಜಿಗಿತ ಕಂಡಿತ್ತು. ಈ ಮೂಲಕ ಮಾರುಕಟ್ಟೆ ಕೂಡ ಮೋದಿ ಪರ ನಿಂತಿತ್ತು. ಮೋದಿ ಸರ್ಕಾರದಲ್ಲಿನ ಹೊಸ ಹೊಸ ಯೋಜನೆಗಳು ಡಿಜಿಟಲೀಕರಣ ಉದ್ಯಮಿಗಳು, ಬಂಡವಾಳ ಹೂಡಿಕೆಗೆದಾರರಿಗೆ ನೆರವಾಗಿದೆ. ಇದು ಕೂಡ ಮೋದಿ ಸರ್ಕಾರದ ಗೆಲುವಿಗೆ ಕಾರಣವಾಗಿದೆ.

ಬಿಜೆಪಿ ಅಬ್ಬರಕ್ಕೆ ನೆಲಕಚ್ಚುತ್ತಿರುವ ಪ್ರಾದೇಶಿಕ ಪಕ್ಷ
ಹಲವು ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲೇ ನೆಲಕಚ್ಚುತ್ತಿದೆ. ಮೋದಿ ಹಾಗೂ ಬಿಜೆಪಿ ಅಬ್ಬರಕ್ಕೆ ಪ್ರಾದೇಶಿಕ ಪಕ್ಷಗಳು ಕಂಗೆಟ್ಟು ಹೋಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅದ್ಬುತ ಸಾಧನೆ ತೋರಿದೆ. ಈ ಮೂಲಕ 2021ರ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳಿಸೋ ಪ್ಲಾನ್ ಬಿಜೆಪಿ ಪಾಲಯದಲ್ಲಿದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯದ ಹಲವು ಪ್ರಾದೇಶಿಕ ಪಕ್ಷಗಳು ಒಂದು, ಎರಡು ಗೆಲುವಿಗೆ ಸೀಮಿತವಾಗಿದೆ.

ಮೋದಿ ಸರ್ಕಾರದ ಸಾಧನೆಗಳು
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದಡಿ ಅಧಿಕಾರ ನಡೆಸುತ್ತಿರುವ ಮೋದಿ ಸರ್ಕಾರ, ಎಲ್ಲಾ ವರ್ಗದ ಜನರಿಗೆ ಅಗತ್ಯ ಸೌಲಭ್ಯ ನೀಡುತ್ತಿದೆ. ಹೊಸ ಹೊಸ ಯೋಜನೆಗಳಿಂದ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಜನಧನ್ ಯೋಜನೆ, ಆವಾಸ್ ಯೋಜನೆ, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ, ಜನೌಷದಿ ಯೋಜನೆ, ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್, ಮುದ್ರಾ ಯೋಜನೆ ಸೇರಿದಂತೆ  ಹಲವು ಯೋಜನೆ ಬಿಜೆಪಿ ವರ್ಚಸ್ಸು ಹೆಚ್ಚಿಸಿತು. ಬ್ಯಾಂಕ್ ಖಾತೆ, ಡಿಜಿಟಲೀಕರಣ ಸೇರಿದಂತೆ ಹಲವು ಮಹತ್ವದ ಬದಲಾವಣೆ ಭಾರತೀಯರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.