ನವದೆಹಲಿ: ಭಾರತ ಏಕದಿನ ತಂಡದ ಆಟಗಾರ ಅಂಬಟಿ ರಾಯುಡು, ಸೀಮಿತ ಓವರ್‌ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸುವ ದೃಷ್ಟಿಯಿಂದ ಶನಿವಾರ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. 

33 ವರ್ಷದ ರಾಯುಡು, ಭಾರತ ಏಕದಿನ ತಂಡದ ಪ್ರಮುಖ ಆಟಗಾರರಾಗಿದ್ದರೂ ತಂಡದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡಲಿಲ್ಲ. ‘ಹೈದರಾಬಾದ್‌ ತಂಡದ ನಾಯಕ ಹಾಗೂ ಭಾರತ ತಂಡದ ಸದಸ್ಯ ಅಂಬಟಿ ರಾಯುಡು, ಏಕದಿನ ಹಾಗೂ ಟಿ20 ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸುವ ಸಲುವಾಗಿ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುತ್ತಿದ್ದಾರೆ’ ಎಂದು ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆ ಪತ್ರಿಕಾ ಪ್ರಕಟಣೆ ನೀಡಿದೆ. 

16ನೇ ವಯಸ್ಸಿನಲ್ಲೇ ಹೈದರಾಬಾದ್‌ ಪರ ರಣಜಿ ಟ್ರೋಫಿ ಆಡಿದ್ದ ರಾಯುಡು, ಸಂಸ್ಥೆಯ ಮುಖ್ಯಸ್ಥ ಶಿವಲಾಲ್‌ ಯಾದವ್‌ ಪುತ್ರನ ಜತೆ ಗಲಾಟೆ ಮಾಡಿಕೊಂಡು ಆಂಧ್ರ ತಂಡಕ್ಕೆ ವಲಸೆ ಹೋಗಿದ್ದರು. ಬಂಡಾಯ ಲೀಗ್‌ ಐಸಿಎಲ್‌ ಸೇರಿದ್ದರಿಂದ ಬಿಸಿಸಿಐ ನಿಷೇಧ ಹೇರಿತ್ತು. ಬಳಿಕ ಹೈದರಾಬಾದ್‌ ತಂಡಕ್ಕೆ ವಾಪಸಾದ ಅವರು, ಕೆಲ ವರ್ಷಗಳ ಕಾಲ ಬರೋಡಾ ತಂಡದ ಪರವೂ ಆಡಿದ್ದರು. 97 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 16 ಶತಕಗಳೊಂದಿಗೆ 6151 ರನ್‌ ಕಲೆಹಾಕಿದ್ದಾರೆ.