ಮೊಹಾಲಿ[ಮಾ.10]: ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಸಿಡಿಲಬ್ಬರದ ಶತಕ ಹಾಗೂ ರೋಹಿತ್ ಶರ್ಮಾ ಶತಕವಂಚಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 4ನೇ ಏಕದಿನ ಪಂದ್ಯದಲ್ಲಿ ಬರೋಬ್ಬರಿ 358 ರನ್ ಬಾರಿಸಿದ್ದು, ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಕಠಿಣ ಗುರಿ ನೀಡಿದೆ.

ಗಬ್ಬರ್ ಸಿಂಗ್ ಶತಕ; ರೋಹಿತ್ ಸೆಂಚುರಿ ಜಸ್ಟ್ ಮಿಸ್..!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ಕೊಹ್ಲಿ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭಿಕರಾದ ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿ ಮೊದಲ ವಿಕೆಟ್’ಗೆ 193 ರನ್’ಗಳ ಜತೆಯಾಟವಾಡಿತು. ಶತಕದ ಹೊಸ್ತಿಲಲ್ಲಿ ರೋಹಿತ್ ಶರ್ಮಾ[95] ಮುಗ್ಗರಿಸಿದರೆ, ಕಳಪೆ ಫಾರ್ಮ್’ನಿಂದ ಬಳಲುತ್ತಿದ್ದ ಶಿಖರ್ ಧವನ್ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಧವನ್ ವಿಕೆಟ್ ಒಪ್ಪಿಸುವ ಮುನ್ನ 115 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 143 ರನ್ ಬಾರಿಸಿ ಕಮ್ಮಿನ್ಸ್ ಬೌಲಿಂಗ್’ನಲ್ಲಿ ವಿಕೆಟ್ ಒಪ್ಪಿಸಿದರು. ಇದು ಧವನ್ ಬಾರಿಸಿದ 16ನೇ ಏಕದಿನ ಶತಕ ಹಾಗೂ ವೈಯುಕ್ತಿಕ ಗರಿಷ್ಠ ಸ್ಕೋರ್ ಕೂಡಾ ಹೌದು.

ಸಚಿನ್-ಸೆಹ್ವಾಗ್ ದಾಖಲೆ ಮುರಿದ ಧವನ್-ರೋಹಿತ್ ಜೋಡಿ..!

ಇನ್ನು ಕಳೆದೆರಡು ಪಂದ್ಯಗಳಲ್ಲಿ ಶತಕ ಸಿಡಿಸಿ ಮಿಂಚಿದ್ದ ಕೊಹ್ಲಿ 7 ರನ್ ಬಾರಿಸಿದರೆ, ಕೆ.ಎಲ್ ರಾಹುಲ್ ಬ್ಯಾಟಿಂಗ್ 26 ರನ್’ಗಳಿಗೆ ಸೀಮಿತವಾಯಿತು. ಕೊನೆಯಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶಸಿದ ರಿಷಭ್ ಪಂತ್ ಕೇವಲ 24 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 36 ರನ್ ಬಾರಿಸಿದರು. ಕೊನೆಯಲ್ಲಿ ವಿಜಯ್ ಶಂಕರ್ ಬ್ಯಾಟಿಂಗ್ [26] ಭಾರತವನ್ನು 350 ರನ್ ಗಡಿ ದಾಟುವಲ್ಲಿ ನೆರವಾಯಿತು.

ಆಸ್ಟ್ರೇಲಿಯಾ ಪರ ಜೇ ರಿಚರ್ಡ್’ಸನ್ 85 ರನ್ ನೀಡಿ ದುಬಾರಿ ಎನಿಸಿದರೂ 3 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ 5 ಪಡೆದರು. ಇನ್ನು ಆ್ಯಡಂ ಜಂಪಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಭಾರತ: 358/9
ಶಿಖರ್ ಧವನ್: 143
ಪ್ಯಾಟ್ ಕಮ್ಮಿನ್ಸ್: 70/5