ಟೀಂ ಇಂಡಿಯಕ್ಕೆ ಕಮ್'ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದ ಸುರೇಶ್ ರೈನಾ ಹಾಗೂ ಯುವರಾಜ್ ಸಿಂಗ್'ಗೆ ನಿರಾಸೆ ಎದುರಾಗಿದೆ.
ಮುಂಬೈ(ಆ.13): 2019ರ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಶ್ರೀಲಂಕಾ ವಿರುದ್ಧದ ಸೀಮಿತ ಓವರ್'ಗಳ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಪ್ರತಿಭಾನ್ವಿತ ಆಟಗಾರ ಮನೀಶ್ ಪಾಂಡೆಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಆದರೆ ಹಿರಿಯ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಅವರಿಗೆ ಕೋಕ್ ನೀಡಲಾಗಿದೆ.
ಇಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 5 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಗೆ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ ತಂಡವನ್ನು ಕೂಡಿಕೊಂಡಿದ್ದಾರೆ.
ಆದರೆ ಹಿರಿಯ ಆಟಗಾರರಾದ ಯುವರಾಜ್ ಸಿಂಗ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಮೊಹಮ್ಮದ್ ಶಮಿ ಹಾಗೂ ರಿಶಬ್ ಪಂತ್'ಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಟೀಂ ಇಂಡಿಯಕ್ಕೆ ಕಮ್'ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದ ಸುರೇಶ್ ರೈನಾ ಹಾಗೂ ಯುವರಾಜ್ ಸಿಂಗ್'ಗೆ ನಿರಾಸೆ ಎದುರಾಗಿದೆ. 2015ರ ಬಳಿಕ ಏಕದಿನ ತಂಡದಿಂದ ಹೊರಗುಳಿದ ಸುರೇಶ್ ರೈನಾ ಹಾಗೂ ವಿಂಡೀಸ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಯುವರಾಜ್ ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟಿರುವುದು, ಈ ಇಬ್ಬರು ಆಟಗಾರರ ಭವಿಷ್ಯದ ಮೇಲೆ ಕಾರ್ಮೋಡ ಆವರಿಸಿದಂತಾಗಿದೆ.
ಹೀಗಿದೆ ಭಾರತ ತಂಡ:
ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ಮನೀಶ್ ಪಾಂಡೆ, ಕೇದಾರ್ ಜಾದವ್, ಎಂಎಸ್ ಧೋನಿ(ವಿಕೆಟ್'ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಯುಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್ ಹಾಗೂ ಭುವನೇಶ್ವರ್ ಕುಮಾರ್.
