ಬೆಂಗಳೂರು[ಆ.24]: ಟೀಂ ಇಂಡಿಯಾ ನಂ.1 ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ರಾಂತಿಯ ಬಳಿಕ ಟೀಂ ಇಂಡಿಯಾ ಕೂಡಿಕೊಂಡಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೇ ಅಪರೂಪದ ಸಾಧನೆ ಮಾಡಿದ್ದಾರೆ. 

ಧೋನಿ ನಾಯಕತ್ವದ ರೆಕಾರ್ಡ್ ಮುರಿಯಲು ಸಜ್ಜಾದ ಕೊಹ್ಲಿ..!

ಹೌದು, ಆ್ಯಂಟಿಗಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಡ್ಯಾರನ್ ಬ್ರಾವೋ ಅವರನ್ನು ಬಲಿಪಡೆಯುವುರದ ಮೂಲಕ ಬುಮ್ರಾ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 50 ವಿಕೆಟ್ ಕಬಳಿಸಿದ ಭಾರತದ ವೇಗದ ಬೌಲರ್ ಎನ್ನುವ ದಾಖಲೆ ಬರೆದರು. ತಮ್ಮ ವೃತ್ತಿಜೀವನದ 11ನೇ ಟೆಸ್ಟ್ ಪಂದ್ಯವಾಡುತ್ತಿರುವ ಬುಮ್ರಾ, ಈ ಮೊದಲು ವೆಂಕಟೇಶ್ ಪ್ರಸಾದ್ ಹಾಗೂ ಮೊಹಮ್ಮದ್ ಶಮಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಪ್ರಸಾದ್ ಹಾಗೂ ಶಮಿ 13 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಇನ್ನು ಟೀಂ ಇಂಡಿಯಾ ಪರ ಅತಿವೇಗವಾಗಿ 50 ಟೆಸ್ಟ್ ವಿಕೆಟ್ ಪಡೆದ ದಾಖಲೆ ಆರ್. ಅಶ್ವಿನ್ ಹೆಸರಿನಲ್ಲಿದೆ. ಅಶ್ವಿನ್ ಕೇವಲ 9 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅನಿಲ್ ಕುಂಬ್ಳೆ 10 ಪಂದ್ಯಗಳಲ್ಲಿ 50 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.  

ಇಶಾಂತ್ ದಾಳಿಗೆ ತತ್ತರ; ಅಲೌಟ್ ಭೀತಿಯಲ್ಲಿ ವಿಂಡೀಸ್!

ಇನ್ನು ಅತಿ ಕಡಿಮೆ ಎಸೆತದಲ್ಲಿ 50 ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ದಾಖಲೆಯೂ ಬುಮ್ರಾ ಪಾಲಾಗಿದೆ. ಬುಮ್ರಾ ಕೇವಲ 2465 ಎಸೆತಗಳನ್ನು ಹಾಕಿ 50 ವಿಕೆಟ್ ಪಡೆದರೆ, ಅಶ್ವಿನ್ 50 ವಿಕೆಟ್ ಪಡೆಯಲು 2597 ಎಸೆತ ಹಾಕಿದ್ದಾರೆ.

2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಬುಮ್ರಾ ಸೀಮಿತ ಓವರ್ ಕ್ರಿಕೆಟ್’ನಲ್ಲಿ ಕಂಡಂತೆ, ರೆಡ್ ಬಾಲ್’ನಲ್ಲೂ ಯಶಸ್ವಿಯಾಗಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಅವರ ನೆಲದಲ್ಲೇ ಟೀಂ ಇಂಡಿಯಾ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವಲ್ಲಿ ಬುಮ್ರಾ ಪಾತ್ರ ಮರೆಯುವಂತಿಲ್ಲ. 4 ಪಂದ್ಯಗಳ ಸರಣಿಯಲ್ಲಿ ಬುಮ್ರಾ 21 ವಿಕೆಟ್ ಪಡೆಯುವ ಮೂಲಕ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದರು.

ಇನ್ನು ಟೆಸ್ಟ್ ಏಕದಿನ ಹಾಗೂ ಟಿ20 ಕ್ರಿಕೆಟ್’ನಲ್ಲಿ 50 ವಿಕೆಟ್ ಪಡೆದ ಭಾರತದ ಮೊದಲ ವೇಗದ ಬೌಲರ್ ಎನ್ನುವ ದಾಖಲೆಯೂ ಇದೀಗ ಜಸ್ಪ್ರೀತ್ ಬುಮ್ರಾ ಪಾಲಾಗಿದೆ.