INDvSA ಕೊಹ್ಲಿ ಅರ್ಧಶತಕ; ಮೊಹಾಲಿಯಲ್ಲಿ ನಲಿದಾಡಿದ ಭಾರತ!
ಸೌತ್ ಆಫ್ರಿಕಾ ವಿರುದ್ಧ ಮೊಹಾಲಿಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಹಾಗೂ ಟೀಂ ಇಂಡಿಯಾ ಯುವ ಬೌಲರ್‌ಗಳ ದಾಳಿಯಿಂದ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ.
ಮೊಹಾಲಿ(ಸೆ.18): ಸೌತ್ ಆಫ್ರಿಕಾ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲಿ ಇದೇ ಮೊದಲ ಬಾರಿಗೆ ಸೌತ್ ಆಫ್ರಿಕಾ ತಂಡವನ್ನು ಸೋಲಿಸಿದ ಸಾಧನೆ ಮಾಡಿದೆ. 3 ಪಂದ್ಯಗಳ ಸರಣಿಯಲ್ಲಿ ಆರಂಭಿಕ ಪಂದ್ಯ ಮಳೆಗೆ ರದ್ದಾಗಿತ್ತು. ಇದೀಗ 2ನೇ ಪಂದ್ಯ ಭಾರತ ಗೆದ್ದುಕೊಂಡಿದ್ದು ಸರಣಿಯಲ್ಲಿ 1-0 ಮುನ್ನಡೆ ಪಡಿದಿದೆ.
ಟೀಂ ಇಂಡಿಯಾ ಬೌಲರ್‌ಗಳ ಅದ್ಬುತ ದಾಳಿಯಿಂದ ಸೌತ್ ಆಫ್ರಿಕಾ ತಂಡವನ್ನು 149 ರನ್‌ಗಳಿಗೆ ಕಟ್ಟಿಹಾಕಿತ್ತು. 150 ರನ್ ಟಾರ್ಗೆಟ್ ಪಡೆದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ರೋಹಿತ್ 12 ರನ್ ಸಿಡಿಸಿ ಔಟಾದರು. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು.
ಅರ್ಧಶತಕದ ಜೊತೆಯಾಟವಾಡಿದ ಕೊಹ್ಲಿ ಹಾಗೂ ಧವನ್ ಅಭಿಮಾನಿಗಳ ಆಂತಕ ದೂರ ಮಾಡಿದರು. ಧವನ್ 40 ರನ್ ಸಿಡಿಸಿ ಔಟಾದರೆ, ಇತ್ತ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು. ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡಕ್ಕೆ ಸಿಲುಕಿರುವ ರಿಷಬ್ ಪಂತ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು.
ಶ್ರೇಯಸ್ ಅಯ್ಯರ್ ಜೊತೆ ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ, ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ವಿರಾಟ್ ಕೊಹ್ಲಿ ಅಜೇಯ 72 ಹಾಗೂ ಶ್ರೇಯಸ್ ಅಯ್ಯರ್ ಅಜೇಯ 16 ರನ್ ಸಿಡಿಸಿದರು. ಈ ಮೂಲಕ ಭಾರತ 19 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ತವರಿನ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ.