ಈ ಸರಣಿಯಲ್ಲಿ ತಂಡ ಅಂಕ ಕಳೆದುಕೊಳ್ಳದಿರುವಂತೆ ನೋಡಿಕೊಳ್ಳುವುದು ನಾಯಕ ಕೊಹ್ಲಿಯ ಜವಾಬ್ದಾರಿಯಾಗಿದೆ. ಯಾಕೆಂದರೆ ಸದ್ಯ 115 ರೇಟಿಂಗ್‌ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಭಾರತ, ಸರಣಿ ಕ್ಲೀನ್‌ ಸ್ವೀಪ್‌ ಮಾಡಿದರೂ ಸಿಗುವುದು ಕೇವಲ ಒಂದೇ ಒಂದು ಅಂಕ ಮಾತ್ರ.

ರಾಜ್’ಕೋಟ್[ಅ.03]: ವೆಸ್ಟ್‌ಇಂಡೀಸ್‌ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಗುರುವಾರದಿಂದ ರಾಜ್‌ಕೋಟ್‌ನಲ್ಲಿ ಮೊದಲ ಟೆಸ್ಟ್‌ ನಡೆಯಲಿದ್ದು ಭಾರತ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ. ಇಂಗ್ಲೆಂಡ್‌ ವಿರುದ್ಧ 1-4ರ ಅಂತರದಲ್ಲಿ ಸರಣಿ ಸೋತರೂ, ಭಾರತ ತಂಡ ಐಸಿಸಿ ಟೆಸ್ಟ್‌ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಳ್ಳಲಿಲ್ಲ. ಇದೀಗ ವೆಸ್ಟ್‌ಇಂಡೀಸ್‌ ವಿರುದ್ಧ 2-0 ಅಂತರದಲ್ಲಿ ಸರಣಿ ಗೆದ್ದು ಅಗ್ರಸ್ಥಾನದಲ್ಲಿ ಮುಂದುವರಿಯಲು ವಿರಾಟ್‌ ಕೊಹ್ಲಿ ಪಡೆ ಎದುರು ನೋಡುತ್ತಿದೆ.

ಈ ಸರಣಿಯಲ್ಲಿ ತಂಡ ಅಂಕ ಕಳೆದುಕೊಳ್ಳದಿರುವಂತೆ ನೋಡಿಕೊಳ್ಳುವುದು ನಾಯಕ ಕೊಹ್ಲಿಯ ಜವಾಬ್ದಾರಿಯಾಗಿದೆ. ಯಾಕೆಂದರೆ ಸದ್ಯ 115 ರೇಟಿಂಗ್‌ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಭಾರತ, ಸರಣಿ ಕ್ಲೀನ್‌ ಸ್ವೀಪ್‌ ಮಾಡಿದರೂ ಸಿಗುವುದು ಕೇವಲ ಒಂದೇ ಒಂದು ಅಂಕ ಮಾತ್ರ. ಆದರೆ ಭಾರತ 0-2 ಅಂತರದಲ್ಲಿ ಸೋಲುಂಡರೆ, ರೇಟಿಂಗ್‌ ಅಂಕ 108ಕ್ಕೆ ಇಳಿಯಲಿದ್ದು ತಂಡ ಅಗ್ರಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರಲಿದೆ. ಒಂದೊಮ್ಮೆ ಪಾಕಿಸ್ತಾನ ವಿರುದ್ಧ ಆಸ್ಪ್ರೇಲಿಯಾ 2-0 ಅಂತರದಲ್ಲಿ ಸರಣಿ ಜಯಿಸಿದರೆ, ಭಾರತವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಲಿದೆ. ವಿಂಡೀಸ್‌ ಸರಣಿ ಗೆಲ್ಲುವುದು ಬಹುತೇಕ ಅಸಾಧ್ಯ ಎನಿಸಿದ್ದು, ಒಂದೊಮ್ಮೆ ಗೆದ್ದರೂ ಸದ್ಯ ಇರುವ 2ನೇ ಸ್ಥಾನದಿಂದೇನೂ ಮೇಲೇಳುವುದಿಲ್ಲ.

ವಿಂಡೀಸ್‌ ಸರಣಿ ಬಳಿಕ ಆಸ್ಪ್ರೇಲಿಯಾ ಪ್ರವಾಸಕ್ಕೆ ತೆರಳಲಿರುವ ಭಾರತ, ಸರಣಿ ಜಯದೊಂದಿಗೆ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು ಎದುರು ನೋಡುತ್ತಿದೆ. ಜತೆಗೆ ಕೆಲ ಹೊಸ ಪ್ರತಿಭೆಗಳನ್ನು ಪರೀಕ್ಷಿಸಲು ಸಹ ತಂಡಕ್ಕೆ ಈ ಸರಣಿ ನೆರವಾಗಲಿದೆ.