ನವದೆಹಲಿ[ಸೆ.04]: ಏಷ್ಯನ್ ಗೇಮ್ಸ್’ನ ಗುಂಡು ಎಸೆದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದ ತಜೀಂದರ್ ಸಿಂಗ್ ಅವರ ತಂದೆ ಕರಮ್ ಸಿಂಗ್ ಮಗನ ಚಿನ್ನದ ಪದಕ ಕಣ್ತುಂಬಿಕೊಳ್ಳುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.
23 ವರ್ಷದ ಪಂಜಾಬ್ ಮೂಲದ ತಜೀಂದರ್ ಸಿಂಗ್ 20.75 ಮೀಟರ್ ದೂರ ಶಾಟ್’ಪುಟ್ ಎಸೆಯುವುದರೊಂದಿಗೆ ಏಷ್ಯನ್ ಗೇಮ್ಸ್’ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದರು. ಪ್ರಶಸ್ತಿ ಗೆದ್ದ ಬೆನ್ನಲ್ಲೇ ಚಿನ್ನದ ಪದಕವನ್ನು ಕಳೆದೆರಡು ವರ್ಷಗಳಿಂದ ಕ್ಯಾನ್ಸರ್’ನೊಂದಿಗೆ ಹೋರಾಡುತ್ತಿರುವ ತನ್ನ ತಂದೆಗೆ ಅರ್ಪಿಸುವುದಾಗಿ ತಜೀಂದರ್ ಹೇಳಿದ್ದರು. ದೇಶಕ್ಕಾಗಿ ಚಿನ್ನ ಗೆಲ್ಲಬೇಕು ಎನ್ನುವ ತಂದೆಯ ಆಸೆಯನ್ನು ಈಡೇರಿಸಿದ್ದ ತಜೀಂದರ್ ಆದಷ್ಟು ಬೇಗ ತಂದೆಯನ್ನು ಭೇಟಿಯಾಗುವ ಆಸೆಯಿಂದ ತವರಿಗೆ ಮರಳಿದ್ದರು.

ಡೆಲ್ಲಿ ಏರ್’ಪೋರ್ಟ್’ಗೆ ಕಾಲಿಡುತ್ತಿದ್ದಂತೆ ತಜೀಂದರ್’ಗೆ ಬ್ಯಾಡ್ ನ್ಯೂಸ್ ಎದುರಾಗಿದೆ. ಭಾರತದ ಅಥ್ಲೇಟಿಕ್ಸ್ ಫೆಡರೇಶನ್ ತಜೀಂದರ್ ತಂದೆಯ ಸಾವಿಗೆ ಸಂತಾಪ ಸೂಚಿಸಿದೆ.