ಗಯಾನ[ಆ.06]: ವೆಸ್ಟ್‌ಇಂಡೀಸ್‌ ವಿರುದ್ಧ ಟಿ20 ಸರಣಿ ವಶಪಡಿಸಿಕೊಂಡಿರುವ ಭಾರತ, ಮಂಗಳವಾರ ಇಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಜಯಿಸಿ ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದೆ. ಈ ಪಂದ್ಯದಲ್ಲಿ ಕೆಲ ಪ್ರಯೋಗಗಳನ್ನು ಮಾಡುವುದಾಗಿಯೂ ನಾಯಕ ವಿರಾಟ್‌ ಕೊಹ್ಲಿ ಸುಳಿವು ನೀಡಿದ್ದು, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌ ಹಾಗೂ ಚಹಾರ್‌ ಸಹೋದರರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ.

ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಕೈವಶ ಮಾಡಿದ ಭಾರತ

ಮೊದಲ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್‌ ನಿಯಮದನ್ವಯ 22 ರನ್‌ಗಳ ಜಯ ಪಡೆದಿತ್ತು. ಎರಡೂ ಪಂದ್ಯಗಳಲ್ಲಿ ಭಾರತ ಅಧಿಕಾರಯುತ ಗೆಲುವು ಸಾಧಿಸುವಲ್ಲಿ ವಿಫಲವಾಗಿತ್ತು. ಏಕದಿನ ಸರಣಿಗೂ ಮುನ್ನ ಭರ್ಜರಿ ಗೆಲುವಿನೊಂದಿಗೆ ತಂಡ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದೆ.

INDvWI 3ನೇ ಟಿ20: ಟೀಂ ಇಂಡಿಯಾದಲ್ಲಿ ಬದಲಾವಣೆ ಸೂಚನೆ ನೀಡಿದ ಕೊಹ್ಲಿ!

ರೋಹಿತ್‌ ಶರ್ಮಾ ಉತ್ತಮ ಲಯದಲ್ಲಿದ್ದು, ಎರಡೂ ಪಂದ್ಯಗಳಲ್ಲಿ ಭಾರತ ಪರ ಗರಿಷ್ಠ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. ಶಿಖರ್‌ ಧವನ್‌, ಏಕದಿನ ಹಾಗೂ ಟೆಸ್ಟ್‌ ಸರಣಿಗೂ ಮುನ್ನ ಲಯ ಕಂಡುಕೊಳ್ಳಲು ಎದುರು ನೋಡುತ್ತಿದ್ದರೆ, ರಿಷಭ್‌ ಪಂತ್‌ ಆಟ ತಂಡದ ಆತಂಕ ಹೆಚ್ಚಿಸಿದೆ. ಡೆಲ್ಲಿಯ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಬೇಜವಾಬ್ದಾರಿತನದ ಆಟ ಮುಂದುವರಿಸಿದರೆ, ವಿಂಡೀಸ್‌ ಪ್ರವಾಸದ ಬಳಿಕ ತವರಿನಲ್ಲಿ ನಡೆಯಲಿರುವ ದ.ಆಫ್ರಿಕಾ ಸರಣಿಗೆ ಅವರನ್ನು ಕೈಬಿಡಬೇಕಾದ ಒತ್ತಡಕ್ಕೆ ಆಯ್ಕೆ ಸಮಿತಿ ಸಿಲುಕಲಿದೆ. ಮಧ್ಯಮ ಕ್ರಮಾಂಕದಿಂದ ಕೊಹ್ಲಿ ಸ್ಥಿರ ಪ್ರದರ್ಶನ ನಿರೀಕ್ಷೆ ಮಾಡುತ್ತಿದ್ದಾರೆ. ಬೌಲರ್‌ಗಳು ಅತ್ಯುತ್ತಮ ಲಯದಲ್ಲಿದ್ದು, ಎರಡೂ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮತ್ತೊಂದೆಡೆ ವಿಂಡೀಸ್‌ ಸತತ 2 ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದೆ. ಹಾಲಿ ವಿಶ್ವ ಚಾಂಪಿಯನ್‌ ತಂಡ ಭಾರೀ ಮುಜುಗರಕ್ಕೆ ಒಳಗಾಗಿದ್ದು, ಅನುಭವಿಗಳ ಕೊರತೆ ಎದ್ದು ಕಾಣುತ್ತಿದೆ. ಈ ಪಂದ್ಯದಲ್ಲಿ ಗೆದ್ದು ವೈಟ್‌ವಾಶ್‌ ಸೋಲಿನಿಂದ ತಪ್ಪಿಸಿಕೊಳ್ಳಲುವ ಒತ್ತಡ ಕಾರ್ಲೋಸ್‌ ಬ್ರಾಥ್‌ವೇಟ್‌ ನೇತೃತ್ವದ ತಂಡದ ಮೇಲಿದೆ.

ಪಿಚ್‌ ರಿಪೋರ್ಟ್‌

ಗಯಾನದ ಪ್ರಾವಿಡೆನ್ಸ್‌ ಮೈದಾನದಲ್ಲಿ 5 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್‌ ಮಾಡಿದ ತಂಡ 3 ಪಂದ್ಯಗಳಲ್ಲಿ ಗೆದ್ದಿದೆ. ಮೊದಲು ಬ್ಯಾಟ್‌ ಮಾಡುವ ತಂಡ 170ಕ್ಕಿಂತ ಹೆಚ್ಚಿನ ಮೊತ್ತ ಗಳಿಸಿದರೆ ಗೆಲುವು ಸುಲಭ. ಮಧ್ಯಮ ವೇಗಿಗಳು, ಸ್ವಿಂಗ್‌ ಬೌಲಿಂಗ್‌ಗೆ ಹೆಚ್ಚಿನ ನೆರವು ಸಿಗಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ಕೃನಾಲ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ದೀಪಕ್‌ ಚಹಾರ್‌, ಭುವನೇಶ್ವರ್‌ ಕುಮಾರ್‌, ರಾಹುಲ್‌ ಚಹಾರ್‌, ಖಲೀಲ್‌ ಅಹ್ಮದ್‌.

ವಿಂಡೀಸ್‌: ಎವಿನ್‌ ಲೆವಿಸ್‌, ಸುನಿಲ್‌ ನರೈನ್‌, ನಿಕೋಲಸ್‌ ಪೂರನ್‌, ಕೀರನ್‌ ಪೊಲ್ಲಾರ್ಡ್‌, ರೋವ್ಮನ್‌ ಪೋವೆಲ್‌, ಕಾರ್ಲೋಸ್‌ ಬ್ರಾಥ್‌ವೇಟ್‌(ನಾಯಕ), ಕೀಮೋ ಪೌಲ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌, ಖಾರಿ ಪಿಯರ್‌.

ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸೋನಿ ಟೆನ್‌ 1