ಇಂದೋರ್[ಮಾ.11]: ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡದ ಗೆಲುವಿನ ಓಟ ಮುಂದುವರಿದಿದೆ. ಲೀಗ್'ನಲ್ಲಿ 7 ಹಾಗೂ ಸೂಪರ್ ಲೀಗ್‌ನಲ್ಲಿ ಆಡಿದ 3 ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಕರ್ನಾಟಕ ತಂಡ, ಸತತ 10 ಜಯ ದಾಖಲಿಸಿದೆ.

ಸೂಪರ್ ಲೀಗ್‌ನಲ್ಲಿ ದೊರೆತ ಹ್ಯಾಟ್ರಿಕ್ ಗೆಲುವಿನೊಂದಿಗೆ ಮನೀಶ್ ಪಾಂಡೆ ಪಡೆ ‘ಬಿ’ ಗುಂಪಿನಲ್ಲಿ 12 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಸೂಪರ್ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಮುಂಬೈ, 2ನೇ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಇದೀಗ 3ನೇ ಪಂದ್ಯದಲ್ಲಿ ದೆಹಲಿ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಭಾನುವಾರ ಟಾಸ್ ಗೆದ್ದ ಕರ್ನಾಟಕ, ದೆಹಲಿ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. 20 ಓವರ್ ಗಳಲ್ಲಿ ದೆಹಲಿ 9 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ಬ್ಯಾಟಿಂಗ್‌ಗೆ ಅಸಾಧ್ಯ ಎನಿಸಿದ್ದ ಪಿಚ್‌ನಲ್ಲಿ ದೆಹಲಿಯ ಸಾಧಾರಣ 110 ರನ್ ಗಳ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು.

ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಲಯದಿಂದ ಮಿಂಚಿದ್ದ ಆರಂಭಿಕ ಬ್ಯಾಟ್ಸ್‌ಮನ್ ರೋಹನ್ ಕದಂ (0) ಖಾತೆ ತೆರೆಯದೆ ಔಟಾದರು. ಬಿ.ಆರ್. ಶರತ್ (15 ಎಸೆತಗಳಲ್ಲಿ 26 ರನ್) ಇಲ್ಲದ ರನ್ ಕದಿಯಲು ಹೋಗಿ ರನೌಟ್‌ಗೆ ಬಲಿಯಾದರು. ಕೇವಲ 37 ರನ್ ಗಳಿಗೆ ಕರ್ನಾಟಕ ತಂಡ ಆರಂಭಿಕರಿಬ್ಬರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕರ್ನಾಟಕದ ಜಯಕ್ಕೆ 73 ರನ್ ಗಳ ಅವಶ್ಯಕತೆಯಿತ್ತು. ಈ ವೇಳೆ ಮುರಿಯದ 3ನೇ ವಿಕೆಟ್‌ಗೆ ಜೊತೆಯಾದ ಮಯಾಂಕ್ ಅಗರ್‌ವಾಲ್ ಹಾಗೂ ಕರುಣ್ ನಾಯರ್, ದೆಹಲಿ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಆರಂಭದಲ್ಲಿ ನಿಧಾನವಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಈ ಇಬ್ಬರೂ ಆಟಗಾರರು, ಬಳಿಕ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದರು. ಮಯಾಂಕ್ (47 ಎಸೆತಗಳಲ್ಲಿ 43 ರನ್), ಕರುಣ್ (23 ಎಸೆತಗಳಲ್ಲಿ 42 ರನ್) ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು. ದೆಹಲಿ ಪರ ನವದೀಪ್ ಸೈನಿ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ದೆಹಲಿ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಮಂಜೋತ್ ಕಾಲ್ರಾ (13) ಮೊದಲ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿದರು. ಉನ್ಮುಕ್ತ್ ಚಾಂದ್ (12) ವೇಗಿ ಕೌಶಿಕ್‌ಗೆ 2ನೇ ಬಲಿಯಾದರು. ನಂತರ ಕಾರಿಯಪ್ಪ ಸ್ಪಿನ್ ಮೋಡಿಗೆ ದೆಹಲಿ ಆಟಗಾರರು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಕೈ ಚೆಲ್ಲಿದರು. 26 ರನ್'ಗೆ 1 ವಿಕೆಟ್ ಕಳೆದುಕೊಂಡಿದ್ದ ದೆಹಲಿ ಅದೇ ಮೊತ್ತಕ್ಕೆ ನಂತರದ 4 ವಿಕೆಟ್'ಗಳು ಉರುಳಿದವು. ಧ್ರುವ್ ಶೋರೆ (0), ಹಿಮ್ಮತ್ (0), ವರುಣ್ (0) ಖಾತೆ ತೆರೆಯಲು ಅವಕಾಶ ಸಿಗಲಿಲ್ಲ. ಈ ಮೂಲಕ ನಾಯಕ ಮನೀಶ್ ಪಾಂಡೆಯ ಭರವಸೆಯನ್ನು ಕರ್ನಾಟಕದ ಬೌಲರ್‌ಗಳು ಉಳಿಸಿಕೊಂಡರು. 6ನೇ ವಿಕೆಟ್‌ಗೆ ನಿತೀಶ್ ರಾಣಾ (37), ಲಲಿತ್ ಯಾದವ್ (33) ತಂಡಕ್ಕೆ ಚೇತರಿಕೆ ನೀಡಿದರು. 54 ರನ್ ಗಳ ಜೊತೆಯಾಟ ನಿರ್ವಹಿಸಿದ ಈ ಜೋಡಿಯನ್ನು ಕಾರಿಯಪ್ಪ ಮುರಿದರು. ಪವನ್ ನೇಗಿ (5) ವಿನಯ್ ಕುಮಾರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರೆ, ಸುಭೋದ್ ಭಾಟಿ (5) ರನೌಟ್ ಆದರು. ಕರ್ನಾಟಕ ಪರ ವಿ. ಕೌಶಿಕ್ 4, ಕಾರಿಯಪ್ಪ 3 ವಿಕೆಟ್ ಪಡೆದರು.