ಸಿಡ್ನಿ[ಜ.03]: ಮಯಾಂಕ್ ಅಗರ್’ವಾಲ್ ಮತ್ತೊಮ್ಮೆ ಮೂರಂಕಿ ಮೊತ್ತ ಮುಟ್ಟುವಲ್ಲಿ ವಿಫಲವಾಗಿದ್ದಾರೆ. ನೇಥನ್ ಲಯನ್ ಬೌಲಿಂಗ್’ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಮಯಾಂಕ್ ಅಗರ್’ವಾಲ್[77] ಸ್ಟಾರ್ಕ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ಕೆ.ಎಲ್ ರಾಹುಲ್ ಮತ್ತೊಮ್ಮೆ ವಿಫಲವಾದರು. ಕೇವಲ 9 ರನ್ ಬಾರಿಸಿ ರಾಹುಲ್, ವೇಗಿ ಹ್ಯಾಜಲ್’ವುಡ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜತೆಯಾದ ಚೇತೇಶ್ವರ್ ಪೂಜಾರ-ಅಗರ್’ವಾಲ್ ಜೋಡಿ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಎರಡನೇ ವಿಕೆಟ್’ಗೆ ಈ ಜೋಡಿ 116 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು.

ಪೂಜಾರ ಎಂದಿನಂತೆ ಮಂದಗತಿಯಲ್ಲಿ ರನ್ ಕಲೆಹಾಕುತ್ತಾ ಸಾಗಿದರೆ, ಅಗರ್’ವಾಲ್ ಸಿಕ್ಕ ಅವಕಾಶವನ್ನು ಮತ್ತೊಮ್ಮೆ ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೂರನೇ ಟೆಸ್ಟ್ ಕ್ರಿಕೆಟ್’ನಲ್ಲಿ ಎರಡನೇ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕ ನೇಥನ್ ಲಯನ್ ಬೌಲಿಂಗ್’ನಲ್ಲಿ 2 ಮುಗಿಲೆತ್ತರದ ಸಿಕ್ಸರ್ ಸಿಡಿಸಿದ ಅಗರ್’ವಾಲ್ ಕೊನೆಗೂ ಲಯನ್’ಗೆ ವಿಕೆಟ್ ಒಪ್ಪಿಸಿದರು. 

ಮೆಲ್ಬರ್ನ್ ಟೆಸ್ಟ್’ನಲ್ಲಿ ಪದಾರ್ಪಣೆ ಮಾಡಿದ್ದ ಅಗರ್’ವಾಲ್, ಮೊದಲ ಇನ್ನಿಂಗ್ಸ್’ನಲ್ಲಿ 76 ರನ್ ಬಾರಿಸಿ ಔಟ್ ಆಗಿದ್ದರು. ಇದೀಗ 77 ರನ್ ಬಾರಿಸಿ ವಿಕೆಟ್ ಒಪ್ಪಿಸುವುದರೊಂದಿಗೆ ಮತ್ತೊಮ್ಮೆ ಮೂರಂಕಿ ಮೊತ್ತ ಮುಟ್ಟುವಲ್ಲಿ ವಿಫಲವಾದರು. ಇದೀಗ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಬ್ಯಾಟಿಂಗ್ ನಡೆಸುತ್ತಿದ್ದಾರೆ.