ಸಿಡ್ನಿ[ಜ.03]: ಟೆಸ್ಟ್ ಪರಿಣಿತ ಚೇತೇಶ್ವರ ಪೂಜಾರ ಸಿಡ್ನಿ ಟೆಸ್ಟ್’ನಲ್ಲಿ ಭರ್ಜರಿ ಶತಕ[118*] ಸಿಡಿಸಿದ್ದಾರೆ. ಈ ಮೂಲಕ 2019ರ ಹೊಸ ವರ್ಷವನ್ನು ಶತಕದೊಂದಿಗೆ ಆರಂಭಿಸಿದ್ದಾರೆ.  ಇದು ಪೂಜಾರ ಟೆಸ್ಟ್ ವೃತ್ತಿ ಜೀವನದ 18ನೇ ಶತಕವಾಗಿದೆ. ಇದೀಗ 80 ಓವರ್ ಮುಕ್ತಾಯದ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡು 266 ರನ್ ಬಾರಿಸಿದೆ. 

ಆಸಿಸ್ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅದ್ಭುತ ಫಾರ್ಮ್’ನಲ್ಲಿರುವ ಪೂಜಾರ 3ನೇ ಶತಕ ಸಿಡಿಸಿ ಸಂಭ್ರಮಿಸಿದರು. 199 ಎಸೆತಗಳನ್ನು ಎದುರಿಸಿದ ಪೂಜಾರ 13 ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದರು. ಅಡಿಲೇಡ್, ಮೆಲ್ಬರ್ನ್ ಬಳಿಕ ಇದೀಗ ಸಿಡ್ನಿಯಲ್ಲೂ ಶತಕ ಸಿಡಿಸುವಲ್ಲಿ ಪೂಜಾರ ಯಶಸ್ವಿಯಾಗಿದ್ದಾರೆ. ಈ ಶತಕ ಸಿಡಿಸುವುದರ ಜತೆಗೆ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಮೂರು ಬಾರಿ 400+ ರನ್ ಬಾರಿಸಿದ ದಾಖಲೆಯನ್ನು ಪೂಜಾರ ಬರೆದರು.

ಟಾಸ್ ಗೆದ್ದ ಟೀಂ ಇಂಡಿಯಾ ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ಆರಂಭ ಪಡೆಯಿತು. ಕೆ.ಎಲ್ ರಾಹುಲ್ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಜತೆಯಾದ ಚೇತೇಶ್ವರ್ ಪೂಜಾರ-ಕನ್ನಡಿಗ ಮಯಾಂಕ್ ಅಗರ್’ವಾಲ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. 2ನೇ ವಿಕೆಟ್’ಗೆ ಈ ಜೋಡಿ 116 ರನ್’ಗಳ ಜತೆಯಾಟವಾಡಿತು. ಮಯಾಂಕ್ 77 ರನ್ ಸಿಡಿಸಿ ಔಟ್ ಆದರು. ಆ ಬಳಿಕ ಕೊಹ್ಲಿ ಜತೆಗೆ ಪೂಜಾರ[54] ಅರ್ಧಶತಕದ ಜತೆಯಾಟವಾಡಿದರು. ಕೊಹ್ಲಿ 23 ರನ್ ಸಿಡಿಸಿ ಹ್ಯಾಜಲ್’ವುಡ್’ಗೆ ವಿಕೆಟ್ ಒಪ್ಪಿಸಿದರು. ರಹಾನೆ ಆಟ 18 ರನ್’ಗಳಿಗೆ ಸೀಮಿತವಾಯಿತು. ಇದೀಗ ಹನುಮ ವಿಹಾರಿ ಜತೆ ಪೂಜಾರ ಇನ್ನಿಂಗ್ಸ್ ಮುಂದುವರೆಸಿದ್ದಾರೆ.