ಬೆಂಗಳೂರು[ಮೇ.29]: ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಚೆನ್ನೈ ಸೂಪರ್’ಕಿಂಗ್ಸ್ 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಬಳಿಕ ಐಪಿಎಲ್’ನಲ್ಲಿ ಮೂರು ಬಾರಿ ಚಾಂಪಿಯನ್ ಆದ 2ನೇ ತಂಡ ಎನ್ನುವ ಹೆಗ್ಗಳಿಕೆಗೆ ಧೋನಿ ನೇತೃತ್ವದ ಸಿಎಸ್’ಕೆ ಪಾತ್ರವಾಗಿದೆ.
ಈ ಬಾರಿ ಧೋನಿಗಾಗಿ ಕಪ್ ಗೆಲ್ಲುತ್ತೇವೆ ಎಂಬ ಮಾತನ್ನು ಸಿಎಸ್’ಕೆ ಎಡಗೈ ಬ್ಯಾಟ್ಸ್’ಮನ್ ಸುರೇಶ್ ರೈನಾ ಉಳಿಸಿಕೊಂಡಿದ್ದಾರೆ. ಸಿಎಸ್’ಕೆ ತಂಡದಲ್ಲಿ ಸುರೇಶ್ ರೈನಾ ಸೇರಿದಂತೆ ಡ್ವೇನ್ ಬ್ರಾವೋ, ಶೇನ್ ವಾಟ್ಸನ್, ಸ್ಯಾಮ್ ಬಿಲ್ಲಿಂಗ್ಸ್, ಅಂಬಟಿ ರಾಯುಡು ಹಾಗೂ ಎಂ.ಎಸ್ ಧೋನಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಟೀಕಾಕಾರರ ಟೀಕೆಗಳನ್ನು ಮೌನವಾಗಿಯೇ ಸಹಿಸಿಕೊಂಡಿದ್ದ ಸಿಎಸ್’ಕೆ ತಮ್ಮ ಪ್ರದರ್ಶನದ ಮೂಲಕ ಟೀಕಾಕಾರ ಬಾಯಿ ಮುಚ್ಚುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
2 ವರ್ಷಗಳ ನಿಷೇಧದ ಬಳಿಕ ಐಪಿಎಲ್ ಟೂರ್ನಿಗೆ ಕಮ್’ಬ್ಯಾಕ್ ಮಾಡಿದ ಸಿಎಸ್’ಕೆ ಪಡೆ ಚಾಂಪಿಯನ್ ಆಗುತ್ತಿದ್ದಂತೆ ಭರ್ಜರಿಯಾಗಿಯೇ ಸಂಭ್ರಮಾಚರಣೆ ಮಾಡಿತು. ಆ ಬಳಿಕ ಟೀಂ ಡಿನ್ನರ್’ನಲ್ಲಿ ಪಾಲ್ಗೊಂಡ ಸುರೇಶ್ ರೈನಾ ಸಹ ಆಟಗಾರರಾದ ಡ್ವೇನ್ ಬ್ರಾವೋ, ಎಂ.ಎಸ್. ಧೋನಿ ಹಾಗೂ ಹರ್ಭಜನ್ ಸಿಂಗ್ ಜೊತೆಗೆ ಫೊಟೊವೊಂದನ್ನು ಕ್ಲಿಕ್ಕಿಸಿ, ’ವಿಸಲ್’ಪೋಡು ಆರ್ಮಿ’ ಎಂಬ ಅಡಿಬರಹ ನೀಡಿದ್ದಾರೆ.