ಚೆನ್ನೈ[ಮೇ.03]: ಎಂ.ಎಸ್‌.ಧೋನಿ ಈ ಆವೃತ್ತಿ ಬಳಿಕ ಐಪಿಎಲ್‌ಗೆ ವಿದಾಯ ಘೋಷಿಸುತ್ತಾರಾ?. ಈ ರೀತಿ ಕುತೂಹಲ ಶುರುವಾಗಿದೆ. ಡೆಲ್ಲಿ ವಿರುದ್ಧ ಬುಧವಾರ ಗೆಲುವು ಸಾಧಿಸಿದ ಬಳಿಕ ತಂಡದ ಬ್ಯಾಟಿಂಗ್‌ ಆಧಾರಸ್ತಂಭ ಹಾಗೂ ಉಪನಾಯಕ ಸುರೇಶ್‌ ರೈನಾ ನೀಡಿದ ಹೇಳಿಕೆ, ಕುತೂಹಲಕ್ಕೆ ಕಾರಣವಾಗಿದೆ.

ಅನಾರೋಗ್ಯದ ಕಾರಣ ಈ ವರ್ಷ ಧೋನಿ 2 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವುದು ಎಷ್ಟುಕಷ್ಟಎನ್ನುವ ಪ್ರಶ್ನೆಗೆ ಉತ್ತರಿಸಿದ ರೈನಾ, ‘ನಾಯಕನಾಗಿ ಅವರ ಅನುಪಸ್ಥಿತಿ ಕಾಡುವುದಕ್ಕಿಂತ ಒಬ್ಬ ಬ್ಯಾಟ್ಸ್‌ಮನ್‌ ಕೊರತೆ ಎದುರಾಗಲಿದೆ. ಬ್ಯಾಟ್ಸ್‌ಮನ್‌ ಹಾಗೂ ಮಾರ್ಗದರ್ಶಕನಾಗಿ ಧೋನಿ ಕಳೆದ ಕೆಲ ವರ್ಷಗಳಿಂದ ಅತ್ಯುತ್ತಮ ಕೆಲಸ ನಿರ್ವಹಿಸಿದ್ದಾರೆ. ಅವರು ತೆರೆ ಮರೆಗೆ ಸರಿದ ಬಳಿಕ ಮುಂದಿನ ವರ್ಷ ನನ್ನನ್ನು ನಾಯಕನಾಗಿ ನೋಡಲಿದ್ದೀರಿ. ಅವರಷ್ಟುಸಾಮರ್ಥ್ಯ ನನಗೆ ಬೇಕಿದೆ. ಅವರು ಇಚ್ಛಿಸುವಷ್ಟುದಿನ ಚೆನ್ನೈ ಪರ ಆಡಲಿದ್ದಾರೆ’ ಎಂದು ಹೇಳಿದ್ದಾರೆ.

2019ರ ಏಕದಿನ ವಿಶ್ವಕಪ್‌ ಬಳಿಕ ಧೋನಿ ಕ್ರಿಕೆಟ್‌ ವೃತ್ತಿಬದುಕಿಗೆ ನಿವೃತ್ತಿ ಘೋಷಿಸುವ ನಿರೀಕ್ಷೆ ಇದೆ. ರೈನಾ ಅದರ ಸುಳಿವು ನೀಡಿದ್ದಾರೆ ಎಂದು ಹಲವರು ವಿಶ್ಲೇಷಿಸಿದ್ದಾರೆ.