ಶಿಸ್ತುಬದ್ಧ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಹೈದರಾಬಾದ್(ಏ.17): ಮನನ್ ವೋಹ್ರಾ ಏಕಾಂಗಿ ಹೋರಾಟದ ನಡುವೆಯೂ ಭುವನೇಶ್ವರ್ ಕುಮಾರ್ ಮಿಂಚಿನ ದಾಳಿಗೆ ತತ್ತರಿಸಿದ ಕಿಂಗ್ಸ್ ಇಲೆವನ್ ಪಂಜಾಬ್ ಐದು ರನ್'ಗಳ ರೋಚಕ ಸೋಲನ್ನನುಭವಿಸಿದೆ.

ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್'ರೈಸರ್ಸ್ ತಂಡ ನಡೆಸಿದ ಸಂಘಟಿತ ಹೋರಾಟದಿಂದ ತವರಿನಲ್ಲಿ ಜಯದ ನಗೆ ಬೀರಿತು.

ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್'ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್(ಅಜೇಯ 70) ಹಾಗೂ ಕೊನೆಯಲ್ಲಿ ನಮಾಜ ಓಜಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್'ಗಳಲ್ಲಿ 159ರನ್ ಕಲೆ ಹಾಕಿತು.

ಅಷ್ಟೇನೂ ಸವಾಲಲ್ಲದ ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವನ್ ಪಡೆ ಮನನ್ ವೋಹ್ರಾ ಹೊರತುಪಡಿಸಿ ಮತ್ಯಾವ ಆಟಗಾರ ಕೂಡ ಕ್ರೀಸ್'ನಲ್ಲಿ ನೆಲೆಯೂರಲು ಪ್ರಯತ್ನಿಸಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ವೋಹ್ರಾ 50 ಎಸೆತಗಳಲ್ಲಿ 9 ಬೌಂಡರಿ ಹಾಘೂ 5 ಸಿಕ್ಸರ್'ಗಳ ನೆರವಿನಿಂದ 95 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಪ್ರಯತ್ನ ನಡೆಸಿದರಾದರೂ ಇನ್ನೊಂದು ತುದಿಯಲ್ಲಿ ಅವರಿಗೆ ಸರಿಯಾಗಿ ಸಾಥ್ ದೊರಕಲಿಲ್ಲ. ಪಂಜಾಬ್ ತಂಡದ ಬ್ಯಾಟ್ಸ್'ಮನ್'ಗಳ ದಯಾನೀಯ ವೈಫಲ್ಯದಿಂದಾಗಿ 5 ರನ್'ಗಳ ಸೋಲನ್ನನುಭವಿಸಬೇಕಾಗಿ ಬಂತು.

ಶಿಸ್ತುಬದ್ಧ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್:

ಸನ್'ರೈಸರ್ಸ್ ಹೈದರಾಬಾದ್: 159/6

ಡೇವಿಡ್ ವಾರ್ನರ್ : 70

ನಮನ್ ಓಜಾ : 34

ಮೋಹಿತ್ ಶರ್ಮಾ: 25/2

ಕಿಂಗ್ಸ್ ಇಲೆವನ್ ಪಂಜಾಬ್: 154/10

ಮನನ್ ವೋಹ್ರಾ: 95

ಇಯಾನ್ ಮಾರ್ಗನ್: 13

ಭುವನೇಶ್ವರ್ ಕುಮಾರ್: 19/5