ಬೌನ್ಸರ್ ಎಸೆತಕ್ಕೆ ಗಾಯಗೊಂಡ ಸ್ಮಿತ್ ಪಂದ್ಯದಿಂದ ಔಟ್; ಜೋಫ್ರಾ ವಿರುದ್ಧ ಆಕ್ರೋಶ!
ಜೋಫ್ರಾ ಆರ್ಚರ್ ಬೌನ್ಸರ್ ಎಸೆತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸ್ಟೀವ್ ಸ್ಮಿತ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಸ್ಮಿತ್ ಬದಲು ಯುವ ಆಟಗಾರ ತಂಡ ಸೇರಿಕೊಂಡಿದ್ದಾರೆ. ಆದರೆ ಈ ಘಟನೆ ಬಳಿಕ ವೇಗಿ ಜೋಫ್ರಾ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಇಂಗ್ಲೆಂಡ್ ವೇಗಿ ವರ್ತನೆಗೆ ಕಿಡಿ ಕಾರಿದ್ದಾರೆ.
ಲಾರ್ಡ್ಸ್(ಆ.18): ಆಶ್ಯಸ್ ಟೆಸ್ಟ್ ಸರಣಿಯಲ್ಲಿ ಸ್ಲೆಡ್ಜಿಂಗ್ ಸಾಮಾನ್ಯವಾಗಿ ಇದ್ದೇ ಇರುತ್ತೆ. ಯಾಕೆಂದರೆ ಒಂದು ರೀತಿಯಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್, ಭಾರತ ಹಾಗೂ ಪಾಕಿಸ್ತಾನ ಮ್ಯಾಚ್ ಇದ್ದ ರೀತಿ. ಇದೀಗ ಆಶ್ಯಸ್ ಟೆಸ್ಟ್ ಸರಣಿಯ ಮತ್ತೊಂದು ವಿವಾದಕ್ಕೆ ತುತ್ತಾಗಿದೆ. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಬೌನ್ಸರ್ ಎಸೆತದಲ್ಲಿ ಆಸೀಸ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಗಂಭೀರವಾಗಿ ಗಾಯಗೊಂಡಿದ್ದರು. ಸ್ಮಿತ್ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ 2ನೇ ಟೆಸ್ಟ್ ಪಂದ್ಯದಿಂದ ಔಟ್ ಆಗಿದ್ದಾರೆ. ಇತ್ತ ವೇಗಿ ಜೋಫ್ರಾ ವರ್ತನೆಗೆ ಮಾಜಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆ್ಯಷಸ್ ಸರಣಿ: 2 ವರ್ಷಗಳ ಬಳಿಕ ಇಶಾಂತ್ ಅನುಕರಣೆ ಮಾಡಿದ ಸ್ಮಿತ್!
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್‌ಗೆ ವೇಗಿ ಜೋಫ್ರಾ ಆರ್ಚರ್ ಬೌನ್ಸರ್ ಎಸೆತ ಎಸೆದಿದ್ದರು. ಹುಕ್ ಶಾಟ್‌ಗೆ ಪ್ರಯತ್ನಿಸಿದ ಸ್ಟೀವ್ ಸ್ಮಿತ್ ಚೆಂಡು ಮಿಸ್ಸಾಗಿತ್ತು. ಹೀಗಾಗಿ ಚೆಂಡು ನೇರವಾಗಿ ಸ್ಮಿತ್ ಕುತ್ತಿಗೆಗೆ ಬಡಿದಿತ್ತು. ತಕ್ಷಣವೇ ನೆಲಕ್ಕುರುಳಿದ ಸ್ಮಿತ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಗಾಯ ಗಂಭೀರವಾದ ಕಾರಣ ಮೈದಾನದಿಂದ ಹೊರನಡೆದರು. ಇದೀಗ ಸ್ಮಿತ್ ಬದಲಿಗೆ ಮಾರ್ನಸ್ ಲ್ಯಾಬ್ಸ್‌ಚಾಗ್ನೆ ತಂಡ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ಸ್ಮಿತ್ ಅಣಕಿಸಿದ ಪ್ರೇಕ್ಷಕರ ವಿರುದ್ಧ ಗರಂ ಆದ ಕೊಹ್ಲಿ!
ಇತ್ತ ಸ್ಮಿತ್ ಮೇಲೆ ಮಾರಕ ಬೌನ್ಸರ್ ಎಸೆತದ ಬಳಿಕ ಜೋಫ್ರಾ ಆರ್ಚರ್ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಸ್ಮಿತ್ ನೆಲಕ್ಕುರಿಳಿದ ಸಂದರ್ಭ ಜೋಫ್ರಾ ನಗುತ್ತಿರುವ ವಿಡೀಯೋ ವೈರಲ್ ಆಗಿದೆ. ಇತ್ತ, ಸ್ಮಿತ್ ಗಾಯದಿಂದ ನರಳಾಡುತ್ತಿದ್ದರೂ, ಜೋಫ್ರಾ ಮಾತ್ರ ಸ್ಮಿತ್ ಕಡೆ ತಿರುಗಿಯೂ ನೋಡಲಿಲ್ಲ. ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಕ್ತರ್, ಆರ್ಚರ್ ವರ್ತನೆಗೆ ಕಿಡಿ ಕಾರಿದ್ದಾರೆ.