ಬೆಂಗಳೂರು(ಮೇ.15): ಕರ್ನಾಟಕದ ಅಥ್ಲೀಟ್‌ಗಳು ಜಾಗತಿಕ ಮಟ್ಟದಲ್ಲಿ ಪದಕ ಗೆಲ್ಲಲು ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ. ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ಒದಗಿಸುತ್ತೇವೆ ಎಂದು ಹೇಳುವ ರಾಜ್ಯ ಸರ್ಕಾರ, ಕ್ರೀಡಾ ಇಲಾಖೆ ರಾಜ್ಯದ ಪ್ರಮುಖ ಕ್ರೀಡಾಂಗಣವಾಗಿರುವ ಕಂಠೀರವದಲ್ಲಿ ಸಿಂಥೆಟಿಕ್‌ ಅಥ್ಲೆಟಿಕ್ಸ್‌ ಟ್ರ್ಯಾಕ್‌ ಹಾಳಾಗಿ ವರ್ಷಗಳೇ ಕಳೆದರೂ ಅದನ್ನು ದುರಸ್ಥಿ ಮಾಡುವ ಮನಸು ಮಾಡಿಲ್ಲ. ಸರಿಯಾದ ಟ್ರ್ಯಾಕ್‌ ಇಲ್ಲದಿದ್ದಾಗ ಅಥ್ಲೀಟ್‌ಗಳು ಅಭ್ಯಾಸ ನಡೆಸುವುದು ಹೇಗೆ?. ಈ ಪ್ರಶ್ನೆಗೆ ಉತ್ತರಿಸುವವರು ಯಾರೂ ಇಲ್ಲ.

ಇದನ್ನೂ ಓದಿ: ವಿಶ್ವಕಪ್ 2019: ಆತಂಕದಲ್ಲಿ ಬಾಲಿವುಡ್ ಚಿತ್ರರಂಗ!

ಕಂಠೀರವ ಕ್ರೀಡಾಂಗಣದ ಅಥ್ಲೆಟಿಕ್ಸ್‌ ಟ್ರ್ಯಾಕ್‌ ನೋಡಿದರೆ ಗುಂಡಿ ಬಿದ್ದ ರಸ್ತೆ ನೋಡಿದಂತಾಗುತ್ತದೆ. ಈ ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸಿಯೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಪರಿಸ್ಥಿತಿ ರಾಜ್ಯ ಅಥ್ಲೀಟ್‌ಗಳಿಗೆ ಎದುರಾಗಿದೆ. 400 ಮೀಟರ್‌ ಟ್ರ್ಯಾಕ್‌ನ ಬಹುಭಾಗ ಹಾಳಾಗಿದೆ. ಅಲ್ಲಲ್ಲಿ ಗುಂಡಿ ಬಿದ್ದಿದೆ. ಸಿಂಥಟಿಕ್‌ ಟ್ರ್ಯಾಕ್‌ ಅಳವಡಿಕೆಗೆ ಅಂದಾಜು .1.5 ಕೋಟಿಯಿಂದ .2 ಕೋಟಿ ವರೆಗೂ ವೆಚ್ಚವಾಗುತ್ತದೆ. ಇಷ್ಟೆಲ್ಲಾ ಖರ್ಚು ಮಾಡಿ ಟ್ರ್ಯಾಕ್‌ ಅಳವಡಿಕೆ ಮಾಡಿದ ಬಳಿಕ ಅದರ ನಿರ್ವಹಣೆಗೆ ಕ್ರೀಡಾ ಇಲಾಖೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ.

ಇದನ್ನೂ ಓದಿ: ಬಿಗ್‌ಬ್ಯಾಶ್‌ನಿಂದ ಹಿಂದೆ ಸರಿದ ಎಬಿ ಡಿ ವಿಲಿಯ​ರ್ಸ್

ಟ್ರ್ಯಾಕ್‌ ಹಾಳಾಗಿರುವ ಬಗ್ಗೆ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ (ಕೆಎಎ) ಹಲವು ಬಾರಿ ಕ್ರೀಡಾ ಇಲಾಖೆಯ ಗಮನಕ್ಕೆ ತಂದರೂ, ಇಲಾಖೆ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ‘ಟ್ರ್ಯಾಕ್‌ ನಿರ್ವಹಣೆ ಕುರಿತು ಯೋಚಿಸುವ ಬದಲು ಪ್ರತಿ ಬಾರಿಯೂ ಹೊಸ ಟ್ರ್ಯಾಕ್‌ ಬಗ್ಗೆಯೇ ಪ್ರಸ್ತಾಪಿಸಲಾಗುತ್ತದೆ. ಹೊಸದಾಗಿ ಟ್ರ್ಯಾಕ್‌ ಅಳವಡಿಸಲು ಸಾಕಷ್ಟುಕ್ರಮ ಕೈಗೊಂಡಿದ್ದೇವೆ. ಆದಷ್ಟುಬೇಗ ಕೆಲಸ ಪೂರ್ಣಗೊಳ್ಳಲಿದೆ ಎಂದು ಇಲಾಖೆಯ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇಲ್ಲಿಯವರೆಗೂ ಯಾವುದೇ ಕೆಲಸವಾಗಿಲ್ಲ’ ಎಂದು ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

23 ವರ್ಷಗಳ ಹಿಂದೆ ಮೊದಲ ಟ್ರ್ಯಾಕ್‌: 1996-97ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಅಥ್ಲೆಟಿಕ್‌ ಗೇಮ್ಸ್‌ ಆಯೋಜಿಸುವ ಸಲುವಾಗಿ ಮೊದಲ ಬಾರಿಗೆ ಸಿಂಥೆಟಿಕ್‌ ಟ್ರ್ಯಾಕನ್ನು ಅಳವಡಿಸಲಾಗಿತ್ತು. ಕೆಲ ವರ್ಷಗಳ ಬಳಿಕ ಟ್ರ್ಯಾಕ್‌ ಹಾಳಾಗಿದ್ದರಿಂದ 10 ವರ್ಷಗಳ ನಂತರ ಅಂದರೆ 2006ರಲ್ಲಿ ದುರಸ್ಥಿ ಕಾರ್ಯ ನಡೆಸಲಾಯಿತು. ಸರಿಯಾದ ನಿರ್ವಹಣೆ ನಡೆಸದ್ದರಿಂದ ಟ್ರ್ಯಾಕ್‌ ಹಾಳಾಯಿತು. 2013ರಲ್ಲಿ ತೆಪೆ ಹಾಕುವ ಕೆಲಸ ಮಾಡಲಾಯಿತೇ ಹೊರತು ಸರಿಯಾಗಿ ನಿರ್ವಹಣೆ ಮಾಡುವ ಕೆಲಸ ಆಗಲೇ ಇಲ್ಲ.

ಟ್ರ್ಯಾಕ್‌ ಹಾಳಾಗಿರುವ ಸಂಬಂಧ ‘ಸುವರ್ಣನ್ಯೂಸ್.ಕಾಂ’ ಹಲವು ಬಾರಿ ಕ್ರೀಡಾ ಇಲಾಖೆಯನ್ನು ಸಂಪರ್ಕಿಸಿದಾಗ, ‘ಕಂಠೀರವ ಕ್ರೀಡಾಂಗಣದಲ್ಲಿನ ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌ಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಶೀಘ್ರದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದಷ್ಟೇ ಪ್ರತಿಕ್ರಿಯೆಗಳು ಬರುತ್ತಿದೆ. ಸುಮಾರು 4 ತಿಂಗಳಿಂದಲೂ ಇಲಾಖೆ ಇದನ್ನೇ ಹೇಳುತ್ತಿದೆ. ಕಳೆದ ವರ್ಷವೇ ಟೆಂಡರ್‌ ಆಗಿದ್ದರೂ, ಟ್ರ್ಯಾಕ್‌ ಅಳವಡಿಕೆ ಕಾರ್ಯ ಇನ್ನೂ ಆರಂಭವಾಗದೆ ಇರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಟ್ರ್ಯಾಕ್‌ ನಿರ್ವಹಣೆಗಿಲ್ಲ ಸಿಬ್ಬಂದಿ
ಕ್ರೀಡಾಂಗಣದ ನಿರ್ವಹಣೆ ಕಾರ್ಯ ರಾಜ್ಯ ಕ್ರೀಡಾ ಇಲಾಖೆ ಸುಪರ್ದಿಯಲ್ಲಿದೆ. ಇತ್ತೀಚೆಗಷ್ಟೇ ಜೆಎಸ್‌ಡಬ್ಲ್ಯೂಗೆ ಗುತ್ತಿಗೆ ನೀಡಿದ್ದ ಫುಟ್ಬಾಲ್‌ ಮೈದಾನವನ್ನು ತನ್ನ ವಶಕ್ಕೆ ಪಡೆದಿರುವ ಇಲಾಖೆ ನಿರ್ವಹಣೆ ಕಾರ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೇವಲ ರಕ್ಷಣೆಗಾಗಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಲಾಗಿದೆ ಹೊರತು ಸಿಂಥೆಟಿಕ್‌ ಟ್ರ್ಯಾಕ್‌ ನಿರ್ವಹಣೆ ಮಾಡಲು ಸಿಬ್ಬಂದಿಯೇ ಇಲ್ಲ. ‘ಸಾಮಾನ್ಯವಾಗಿ ಅಥ್ಲೆಟಿಕ್‌ ಸಿಂಥೆಟಿಕ್‌ ಟ್ರ್ಯಾಕ್‌ 3 ರಿಂದ 4 ವರ್ಷ ಬಾಳಿಕೆ ಬರಲಿದೆ. ವಿದೇಶಗಳಲ್ಲಿ 3 ವರ್ಷಗಳಿಗೊಮ್ಮೆ ಟ್ರ್ಯಾಕನ್ನು ಬದಲಾಯಿಸಲಾಗುತ್ತದೆ. ಉತ್ತಮ ಗುಣಮಟ್ಟದ ಟ್ರ್ಯಾಕ್‌ಗಳಲ್ಲೂ ವ್ಯತಿರಿಕ್ತ ಹವಾಗುಣದ ಕಾರಣ 1 ವರ್ಷದಲ್ಲಿ ಗುಳ್ಳೆಗಳು ಏಳುವುದು ಸಹಜ, ಆಗಾಲೇ ಅದನ್ನು ನಿರ್ವಹಣೆ ಮಾಡಿದರೆ 3 ವರ್ಷ ಬಾಳಿಕೆ ಬರುತ್ತದೆ. ಆದರೆ ಕಂಠೀರವ ಕ್ರೀಡಾಂಗಣದಲ್ಲಿ ಟ್ರ್ಯಾಕ್‌ ನಿರ್ಮಿಸಿ 13 ವರ್ಷವಾದರೂ ಬದಲಾಯಿಸಿಲ್ಲ. ಕನಿಷ್ಠ 6 ವರ್ಷಕ್ಕೊಮ್ಮೆಯಾದರೂ ಟ್ರ್ಯಾಕ್‌ ಬದಲಾವಣೆ ಮಾಡಿದರೂ ಇಷ್ಟೋತ್ತಿಗಾಗಲೇ 2 ಬಾರಿ ಟ್ರ್ಯಾಕ್‌ ಬದಲಾಯಿಸಬೇಕಿತ್ತು’ ನಿವೃತ್ತ ಹಿರಿಯ ಅಥ್ಲೆಟಿಕ್‌ ಕೋಚ್‌ ಮಾಹಿತಿ ನೀಡಿದ್ದಾರೆ.

ಧನಂಜಯ ಎಸ್‌.ಹಕಾರಿ