ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ್ದ ಕುಲ್ದೀಪ್ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಸೀಮಿತ ಓವರ್'ಗಳ ಕ್ರಿಕೆಟ್'ನಲ್ಲೂ ಕುಲ್ದೀಪ್ ಸಾಕಷ್ಟು ಮಿಂಚು ಹರಿಸುತ್ತಿದ್ದಾರೆ.
ಲಖನೌ(ನ.13): ಭಾರತ ಕ್ರಿಕೆಟ್ ತಂಡದ ಯುವ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಕೆಲ ವರ್ಷಗಳ ಹಿಂದೆ ತಾವು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಗಿ ಹೇಳಿಕೊಂಡಿದ್ದಾರೆ.ಕುಲ್ದೀಪ್ ಹೇಳಿಕೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳಿಗೆ ಭಾರೀ ಆಘಾತ ನೀಡಿದೆ.
ಇಲ್ಲಿ ನಡೆದ ಹಿಂದುಸ್ಥಾನ್ ಶಿಖರ್ ಸಂಗಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಕುಲ್ದೀಪ್ ‘ಉತ್ತರ ಪ್ರದೇಶ ಅಂಡರ್-15 ತಂಡದಿಂದ ನನ್ನನ್ನು ಏಕಾಏಕಿ ಕೈಬಿಡಲಾಗಿತ್ತು. ಆಯ್ಕೆಗಾಗಿ ನಾನು ಸಾಕಷ್ಟು ಪರಿಶ್ರಮಪಟ್ಟಿದ್ದೆ. ಆದರೆ ನಾನು ಆಯ್ಕೆಯಾಗದಿದ್ದಾಗ, ಆ ಬೇಸರವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜಿಗುಪ್ಸೆಗೆ ಒಳಗಾದ ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ. ಪ್ರತಿಯೊಬ್ಬರ ಜೀವನದಲ್ಲೂ ಈ ರೀತಿಯ ಘಟನೆಗಳು ನಡೆಯುತ್ತವೆ’ ಎಂದು ಆಘಾತಕಾರಿ ಘಟನೆಯನ್ನು ಬಿಚ್ಚಿಟ್ಟರು.
‘ಶಾಲೆಯಲ್ಲಿ ನಾನು ಅಗ್ರ ಶ್ರೇಯಾಂಕ ಪಡೆದುಯುತ್ತಿದ್ದ ವಿದ್ಯಾರ್ಥಿಯಾಗಿದ್ದೆ. ನನ್ನ ತಂದೆ ಒತ್ತಾಯಿಸಿದ್ದರಿಂದ ಕ್ರಿಕೆಟ್ ಆಡಲು ಆರಂಭಿಸಿದೆ. ವೇಗದ ಬೌಲರ್ ಆಗಬೇಕು ಎಂದು ನನಗೆ ಆಸೆಯಿತ್ತು, ನನ್ನ ಕೋಚ್ ಸ್ಪಿನ್ನರ್ ಆಗಲು ಸಲಹೆ ನೀಡಿದರು. ಕೆಲ ಘಟನೆಗಳು ನಮ್ಮ ಜೀವನವನ್ನೇ ಬದಲಿಸಲಿವೆ’ ಎಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ್ದ ಕುಲ್ದೀಪ್ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಸೀಮಿತ ಓವರ್'ಗಳ ಕ್ರಿಕೆಟ್'ನಲ್ಲೂ ಕುಲ್ದೀಪ್ ಸಾಕಷ್ಟು ಮಿಂಚು ಹರಿಸುತ್ತಿದ್ದಾರೆ.