ಚೆನ್ನೈ(ಮಾ.09): ವಿರಾಟ್ ಕೊಹ್ಲಿ ಆಯ್ಕೆ ಬಗೆಗಿನ ವೆಂಗ್'ಸರ್ಕಾರ್ ಹೇಳಿಕೆಗೆ ಮಾಜಿ ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸನ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ವೆಂಗ್'ಸರ್ಕಾರ್ ಹೇಳಿಕೆ ಶುದ್ಧ ಸುಳ್ಳು ಹಾಗೂ ಆಧಾರರಹಿತವಾದದ್ದು. ಓರ್ವ ಕ್ರಿಕೆಟಿಗನಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಶ್ರೀನಿ ಕಿಡಿಕಾರಿದ್ದಾರೆ. 2008ರ ಪ್ರಸಂಗವನ್ನು ವೆಂಗ್'ಸರ್ಕಾರ್ ನೆನಪಿಸಿಕೊಳ್ಳುತ್ತಿರುವ ಹಿಂದಿನ ಉದ್ದೇಶವೇನೆಂದು ನನಗೆ ಅರ್ಥವಾಗುತ್ತಿಲ್ಲ. ಆ ವೇಳೆ ತಂಡದ ಆಯ್ಕೆಯಲ್ಲಿ ನಾನು  ಭಾಗಿಯಾಗಿರಲಿಲ್ಲ ಎಂದು ಹೇಳಿದ್ದಾರೆ.

ದಿಲೀಪ್ ವೆಂಗ್'ಸರ್ಕಾರ್ 2008 ಲಂಕಾ ಪ್ರವಾಸದ ವೇಳೆ ಕೊಹ್ಲಿ ಬದಲು ಬದರಿನಾಥ್ ಅವರನ್ನು ಆಯ್ಕೆ ಮಾಡುವಂತೆ ಶ್ರೀನಿ ಒತ್ತಡ ಹೇರಿದ್ದರು. ಆದರೆ ಅದೇ ವೇಳೆ ಅಂಡರ್ 19 ವಿಶ್ವಕಪ್ ಗೆದ್ದುಕೊಟ್ಟಿದ್ದ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದೆ. ಹೀಗಾಗಿ ನಾನು ಆಯ್ಕೆ ಸಮಿತಿಯಿಂದ ಕೆಳಗಿಳಿಯಬೇಕಾಯಿತು ಎಂದು ಶ್ರೀನಿವಾಸನ್ ಮೇಲೆ ಆರೋಪ ಮಾಡಿದ್ದರು.

ಭಾರತ ತಂಡದಲ್ಲಿ ಯುವ ಪ್ರತಿಭೆಗೆ ಅವಕಾಶ ಮಾಡಿಕೊಡಲು ವೆಂಗಸರ್ಕರ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದರು. ಆಗ ನಾಯಕರಾಗಿದ್ದ ಧೋನಿ ಹಾಗೂ ಕೋಚ್ ಗ್ಯಾರಿ ಕ್ರಿಸ್ಟನ್ ಕೊಹ್ಲಿ ಬಗ್ಗೆ ಸಹಮತವಿರಲಿಲ್ಲ. ಮರುದಿನ ವೆಂಗಸರ್ಕರ್'ಗೆ ಕರೆ ಮಾಡಿದ ಶ್ರೀನಿವಾಸನ್ ಬದರಿನಾಥ್ ಅವರನ್ನು ಆಯ್ಕೆ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ದಿಲೀಪ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.       

ಮರುದಿನ ದಿಲೀಪ್ ವೆಂಗಸರ್ಕರ್ ಅವರನ್ನು ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟು ಶ್ರೀಕಾಂತ್ ಅವರನ್ನು ನೇಮಿಸಿಕೊಳ್ಳಲಾಗಿತ್ತು.