2015ರಲ್ಲಿ ಶ್ರೀಕಾಂತ್ ಮೂರನೇ ಸ್ಥಾನ ಹೊಂದಿದ್ದು ಇಲ್ಲಿವರೆಗಿನ ಸಾಧನೆಯಾಗಿದೆ.

ಬೆಂಗಳೂರು(ಜೂ.29); ಸತತ ಎರಡು ಸೂಪರ್ ಸೀರಿಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಕೆ. ಶ್ರೀಕಾಂತ್ ನೂತನವಾಗಿ ಬಿಡುಗಡೆಯಾಗಿರುವ ಬಿಡ್ಲ್ಯೂಎಫ್ ಶ್ರೇಯಾಂಕದಲ್ಲಿ ಮೂರು ಸ್ಥಾನಗಳ ಏರಿಕೆ ಕಂಡು ಎಂಟನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಿ. ಗೋಪಿಚಂದ್ ಗರಡಿಯಲ್ಲಿ ಪಳಗುತ್ತಿರುವ ಶ್ರೀಕಾಂತ್, ಕಳೆದ ಎರಡು ವಾರಗಳಲ್ಲಿ ಇಂಡೋನೇಷ್ಯಾ ಓಪನ್ ಹಾಗೂ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಸುಮಾರು 14 ಸ್ಥಾನ ಮೇಲೇರಿದ್ದಾರೆ. ಕೆ. ಶ್ರೀಕಾಂತ್ ವೃತ್ತಿಜೀವನದಲ್ಲೇ ಗರಿಷ್ಟ ಸ್ಥಾನ ಹಿಂದಿಕ್ಕಲು ಇನ್ನೈದು ಶ್ರೇಯಾಂಕ ಗಳಿಸಬೇಕಿದೆ. 2015ರಲ್ಲಿ ಶ್ರೀಕಾಂತ್ ಮೂರನೇ ಸ್ಥಾನ ಹೊಂದಿದ್ದು ಇಲ್ಲಿವರೆಗಿನ ಸಾಧನೆಯಾಗಿದೆ.

ಇನ್ನುಳಿದಂತೆ ಆಸ್ಟ್ರೇಲಿಯನ್ ಓಪನ್'ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಸಾಯಿ ಪ್ರಣೀತ್ 15 ನೇ ಶ್ರೇಯಾಂಕ ಪಡೆದರೆ, ಅಜಯ್ ಜಯರಾಮ್ 16ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಇನ್ನು ಇಂಡೋನೇಷ್ಯಾ ಓಪನ್'ನಲ್ಲಿ ಘಟಾನುಘಟಿ ಆಟಗಾರರನ್ನು ಮಣಿಸಿ ರನ್ನರ್ ಅಪ್ ಆಗಿದ್ದ ಹೆಚ್.ಎಸ್ ಪ್ರಣಯ್ 23ನೇ ಸ್ಥಾನದಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಭಾರತದ ನಂ.1 ಆಟಗಾರ್ತಿ ಪಿ.ವಿ. ಸಿಂಧು ಬಿಡ್ಲ್ಯೂಎಫ್ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿದ್ದರೆ, ಸೈನಾ ನೆಹ್ವಾಲ್ ಒಂದು ಸ್ಥಾನ ಏರಿಕೆ ಕಂಡು 15ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.