ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಾದಾರ್ಪಣಾ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತ ವಿಶ್ವದ ಮೂರನೇ ಬೌಲರ್ ಎಂಬ ಹಿರಿಮೆಯೂ ಹಸರಂಗಾ ಡಿಸಿಲ್ವಾ ಪಾಲಾಯಿತು.
ಗಾಲೆ(ಜು.04): ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್'ನ ಕನಸಾಗಿರುತ್ತದೆ. ಅದರಲ್ಲೂ ಪಾದಾರ್ಪಣೆ ಪಂದ್ಯದಲ್ಲೇ ಆ ಸಾಧನೆ ಸಾಕಾರವಾದರೆ ಹೇಗಿರಬಹುದು? ಅದು ಆ ಕ್ರಿಕೆಟಿಗ ಜೀವನದಲ್ಲಿ ಎಂದೆಂದೂ ಮರೆಯಲಾರದ ಕ್ಷಣವೆನಿಸುವುದರಲ್ಲಿ ಆಶ್ಚರ್ಯವೇಯಿಲ್ಲ.
ಹೌದು ಪಾದಾರ್ಪಣ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ಶ್ರೀಲಂಕಾದ ಮೊದಲ ಹಾಗೂ ವಿಶ್ವದ ಮೂರನೇ ಬೌಲರ್ ಎನ್ನುವ ಶ್ರೇಯಕ್ಕೆ ಶ್ರೀಲಂಕಾದ ವನಿಡು ಹಸರಂಗಾ ಡಿಸಿಲ್ವಾ ಪಾತ್ರರಾಗಿದ್ದಾರೆ.
ಗಾಲೆಯಲ್ಲಿ ಜಿಂಬಾಬ್ವೆ ವಿರುದ್ಧ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿದ ಹಸರಂಗಾ ಡಿಸಿಲ್ವಾ, ಶ್ರೀಲಂಕಾ ಪರ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಐದನೇ ಆಟಗಾರ ಎನ್ನುವ ಖ್ಯಾತಿಗೂ ಭಾಜನರಾದರು. ಈ ಮೊದಲು ಶ್ರೀಲಂಕಾ ಪರ ಚಮಿಂಡಾ ವಾಸ್, ಲಸಿತ್ ಮಾಲಿಂಗಾ, ಫರ್ವೇಜ್ ಮಹರೂಪ್ ಮತ್ತು ತಿಸಾರ ಪೆರೇರ ಏಕದಿನ ಕ್ರಿಕೆಟ್'ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಸತತ ಮೂರು ಎಸೆತಗಳಲ್ಲಿ ಜಿಂಬಾಬ್ವೆಯ ಮಾಲ್ಕಮ್ ಮಾರ್ಷಲ್, ಡೊನಾಲ್ಡ್ ತಿರಿಪನೋ ಹಾಗೂ ತೆಂಡೈ ಚಟಾರ ಅವರನ್ನು 19 ವರ್ಷದ ಹಸರಂಗಾ ಡಿಸಿಲ್ವಾ ಪೆವಿಲಿಯನ್ ಹಾದಿ ತೋರಿಸಿದರು.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಾದಾರ್ಪಣಾ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತ ವಿಶ್ವದ ಮೂರನೇ ಬೌಲರ್ ಎಂಬ ಹಿರಿಮೆಯೂ ಹಸರಂಗಾ ಡಿಸಿಲ್ವಾ ಪಾಲಾಯಿತು. ಈ ಮೊದಲು ಬಾಂಗ್ಲಾದೇಶದ ತೈಜುಲ್ ಇಸ್ಲಾಮ್ ಹಾಗೂ ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ ತಾವಾಡಿದ ಚೊಚ್ಚಲ ಏಕದಿನ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧನೆ ಮಾಡಿ ಸಂಭ್ರಮಿಸಿದ್ದರು.
