ಭಾರತದ ಟಿ20 ವಿಶ್ವಕಪ್ ಗೆಲುವು: ನಿರ್ಣಾಯಕ ಹಂತಗಳಲ್ಲಿ ಮಿಂಚಿದ ಟೀಂ ಇಂಡಿಯಾದ ಸೂಪರ್ ಸ್ಟಾರ್ಸ್
ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ತಂಡದ 15 ಆಟಗಾರರ ಕೊಡುಗೆಯೂ ಮಹತ್ವದ್ದಾಗಿದೆ. ಈ ಪೈಕಿ, ಇಶಾನ್ ಕಿಶನ್, ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಬೂಮ್ರಾ ಸೇರಿದಂತೆ ಕೆಲ ಆಟಗಾರರು ನಿರ್ಣಾಯಕ ಹಂತಗಳಲ್ಲಿ ಮಿಂಚಿ ತಂಡದ ಗೆಲುವಿನ ಸೂಪರ್‌ಸ್ಟಾರ್‌ಗಳಾಗಿ ಹೊರಹೊಮ್ಮಿದ್ದಾರೆ.

ಸೂಪರ್‌ಸ್ಟಾರ್
ಚಾಂಪಿಯನ್ ಭಾರತಕ್ಕೆ ತಂಡದ 15 ಆಟಗಾರರ ಕೊಡುಗೆಯೂ ಮಹತ್ವದ್ದು. ಆದರೆ ಕೆಲ ಆಟಗಾರರು ಟೂರ್ನಿಯುದ್ದಕ್ಕೂ ಮಿಂಚಿದರು. ನಿರ್ಣಾಯಕ ಘಟ್ಟಗಳಲ್ಲಿ ತಂಡದ ಕೈಹಿಡಿದು ಸೂಪರ್‌ಸ್ಟಾರ್‌ಗಳಾಗಿ ಹೊರಹೊಮ್ಮಿದರು. ಈ ಪೈಕಿ ಕೆಲ ಆಟಗಾರರ ವಿವರ ಇಲ್ಲಿದೆ.
ಇಶಾನ್ ಕಿಶನ್- 8 ಪಂದ್ಯ, 263 ರನ್
ಈ ವಿಶ್ವಕಪ್‌ನಲ್ಲಿ ಇಶಾನ್ ಸಿಡಿಸಿದ್ದು 2 ಅರ್ಧಶತಕವಾದರೂ, ಕಪ್ ಗೆಲುವಿನಲ್ಲಿ ಅವರ ಕೊಡುಗೆ ದೊಡ್ಡದು. ನಮೀಬಿಯಾ ವಿರುದ್ಧ 61, ಪಾಕ್ ವಿರುದ್ಧ 77 ರನ್ ಗಳಿಸಿದ್ದ ಅವರು, ಜಿಂಬಾಬ್ವೆ ವಿರುದ್ಧ ಬಾರಿಸಿದ 24 ಎಸೆತಕ್ಕೆ 38, ಇಂಗ್ಲೆಂಡ್ ವಿರುದ್ಧ 18 ಎಸೆತಕ್ಕೆ 39 ರನ್ ಕೂಡಾ ತಂಡಕ್ಕೆ ವರದಾನವಾಯಿತು.
ಸೂರ್ಯಕುಮಾರ್ -8 ಪಂದ್ಯ, 242 ರನ್
ಟಿ20 ವಿಶ್ವಕಪ್‌ಗೂ ಮೊದಲು ರನ್ ಗಳಿಸಲು ಪರದಾಡುತ್ತಿದ್ದ ಸೂರ್ಯ, ಟೂರ್ನಿಯಲ್ಲಿ ನಾಯಕನ ಆಟವಾಡಿದರು. ಏಕೈಕ ಅರ್ಧಶತಕ(ಯುಎಸ್‌ಎ ವಿರುದ್ಧ 84 ರನ್) ಸಿಡಿಸಿದರೂ, ಇತರ ಪಂದ್ಯಗಳಲ್ಲೂ ಅವರ 30+ ರನ್‌ಗಳು ತಂಡದ ಕೈಹಿಡಿಯಿತು.
ಸಂಜು ಸ್ಯಾಮ್ಸನ್- 4 ಪಂದ್ಯ, 232 ರನ್
ಸಂಜು ಸ್ಯಾಮ್ಸನ್ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡಲು ಸಹಾಯ ಮಾಡಿದ್ದಲ್ಲದೇ, ಇನ್ನೇನು ಕೊನೆಗೊಳ್ಳಬೇಕಿದ್ದ ತಮ್ಮ ಕ್ರಿಕೆಟ್ ವೃತ್ತಿ ಬದುಕನ್ನೂ ಜೀವಂತಗೊಳಿಸಿದರು. ಆಡಿದ ಪ್ರತಿ ಪಂದ್ಯದಲ್ಲೂ ಅವರಿಂದ ತಂಡಕ್ಕೆ ಉಪಯುಕ್ತ ಕೊಡುಗೆ ಲಭಿಸಿತು. ಸೂಪರ್-8, ಸೆಮೀಸ್‌ನಲ್ಲಂತೂ ತಂಡಕ್ಕೆ ಆಪತ್ಬಾಂಧವರಾದರು.
ಶಿವಂ ದುಬೆ -209 ರನ್, 5 ವಿಕೆಟ್
ಬೌಲಿಂಗ್‌ನಲ್ಲಿ ದುಬಾರಿಯಾದರೂ ಶಿವಂ ದುಬೆ ಸಂಕಷ್ಟದ ಸಮಯದಲ್ಲಿ ತಂಡಕ್ಕೆ ಮಹತ್ವದ ಕೊಡುಗೆ ನೀಡಿದರು. 159.54ರ ಸ್ಟ್ರೈಕ್‌ರೇಟ್‌ನಲ್ಲಿ 1 ಅರ್ಧಶತಕ ಒಳಗೊಂಡ 209 ರನ್ ಸಿಡಿಸಿದ ಅವರು, 5 ವಿಕೆಟ್ ಕೂಡಾ ಪಡೆದಿದ್ದಾರೆ.
ಹಾರ್ದಿಕ್ ಪಾಂಡ್ಯ- 199 ರನ್, 8 ವಿಕೆಟ್
ಬಲಿಷ್ಠ ಹೊಡೆತ, ಸ್ಫೋಟಕ ಆಟ, ಪವರ್-ಪ್ಲೇನಲ್ಲೇ ಪ್ರಮುಖರ ವಿಕೆಟ್ ಪಡೆಯುವ ಹಾರ್ದಿಕ್ ಪಾಂಡ್ಯ ಈ ಬಾರಿ ವಿಶ್ವಕಪ್‌ನಲ್ಲೂ ತಂಡದ ಗೆಲುವಿಗೆ ನೀಡಿದ ಕೊಡುಗೆ ಮಹತ್ವದ್ದು. 8 ಪಂದ್ಯಗಳನ್ನಾಡಿರುವ ಅವರು 199 ರನ್ ಗಳಿಸಿದ್ದು, 8 ವಿಕೆಟ್ ಕೂಡಾ ಕಬಳಿಸಿದ್ದಾರೆ.
ಜಸ್‌ಪ್ರೀತ್ ಬೂಮ್ರಾ- 7 ಪಂದ್ಯ, 10 ವಿಕೆಟ್
ಕಪ್ ಗೆಲುವಿನಲ್ಲಿ ಬೂಮ್ರಾ ಕೊಡುಗೆಯನ್ನು ಪದಗಳಲ್ಲಿ ವಿವರಿಸುವುದು ಕಷ್ಟ, ಸ್ಕೋರ್‌ಬೋರ್ಡ್‌ನಲ್ಲಿ ಕಾಣಿಸುವ ಅಂಕಿ ಅಂಶ ಕೂಡಾ ಅವರ ಸಾಧನೆಗೆ ನ್ಯಾಯ ಒದಗಿಸಲ್ಲ. 7 ಪಂದ್ಯದಲ್ಲಿ ಕಿತ್ತ ವಿಕೆಟ್ 10 ಆದರೂ, ಕೇವಲ 6.62ರ ಏಕಾನಮಿಯಲ್ಲಿ 24 ಓವರ್‌ನಲ್ಲಿ 159 ರನ್ ನೀಡಿದ್ದಾರೆ. ಟೂರ್ನಿಯ ಗರಿಷ್ಠ ವಿಕೆಟ್ ಸರದಾರರ ಪಟ್ಟಿಯಲ್ಲಿ ಅಗ್ರ 37 ಆಟಗಾರರಲ್ಲಿ ಬೂಮ್ರಾರ ಎಕಾನಮಿಯೇ ಕನಿಷ್ಠ ಎಂಬುದು ಅವರ ಸಾಧನೆಗೆ ಹಿಡಿದ ಕೈಗನ್ನಡಿ
ಅಕ್ಷರ್ ಪಟೇಲ್ - 6 ಪಂದ್ಯ, 8 ವಿಕೆಟ್
ಬ್ಯಾಟಿಂಗ್ ಸಿಕ್ಕ 4 ಇನ್ನಿಂಗ್ಸ್‌ನಲ್ಲಿ ಅಕ್ಷರ್ ಗಳಿಸಿದ್ದು 16 ರನ್ ಆಗಿದ್ದರೂ, ಬೌಲಿಂಗ್‌ನಲ್ಲಿ 8 ವಿಕೆಟ್ ಪಡೆದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಫೀಲ್ಡಿಂಗ್‌ನಲ್ಲಿ ಅವರು ತೋರಿದ ಸಾಧನೆ ಮಹತ್ವದ್ದು. ಜಡೇಜಾ ಸ್ಥಾನ ತುಂಬುವ ರೀತಿ ಆಕರ್ಷಕ ಫೀಲ್ಡಿಂಗ್, ಅಮೋಘ ಕ್ಯಾಚ್‌ಗಳ ಮೂಲಕ ತಂಡದ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಇದನ್ನೂ ಓದಿ: T20 ವಿಶ್ವಕಪ್ ಗೆಲುವಿನ ಹಾದಿಯಲ್ಲಿ ಭಾರತೀಯರು ಎಂದಿಗೂ ಮರೆಯಲಾಗದ ಆರು ಸೂಪರ್ ಕ್ಷಣಗಳು
ವರುಣ್ ಚಕ್ರವರ್ತಿ- 8 ಪಂದ್ಯ, 13 ವಿಕೆಟ್
ಸೂಪರ್-8, ಸೆಮೀಸ್ ಪಂದ್ಯಗಳಲ್ಲಿ ದುಬಾರಿಯಾದರೂ ವರುಣ್ ಚಕ್ರವರ್ತಿ ಸಾಧನೆಯನ್ನು ಅಲ್ಲಗಳೆಯುವಂತಿಲ್ಲ. ಅವರು ಈ ಬಾರಿ ಆಡಿದ 8 ಪಂದ್ಯಗಳಲ್ಲೂ ಕನಿಷ್ಠ 1 ವಿಕೆಟ್ ಕಬಳಿಸಿದ್ದಾರೆ. ಒಟ್ಟು 13 ವಿಕೆಟ್ ಪಡೆದಿರುವ ಅವರು, ನಮೀಬಿಯಾ ವಿರುದ್ಧ 7 ರನ್ ನೀಡಿ 3 ವಿಕೆಟ್ ಕಿತ್ತಿದ್ದರು.
ಇದನ್ನೂ ಓದಿ: 5 ಎಸೆತಕ್ಕೆ 5 ವಿಕೆಟ್ ಕಿತ್ತ ನ್ಯೂಜಿಲೆಂಡ್‌ನ ರಾಂಡೆಲ್: ಪ್ರಥಮ ದರ್ಜೆಯ 254 ವರ್ಷದಲ್ಲಿ ಇದೇ ಮೊದಲು!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
